skip to main |
skip to sidebar
ಒಂದು ಸಾಮಾಜಿಕ ವ್ಯವಸ್ಥೆ ಅಂದಮೇಲೆ ಎರಡು ಅಭಿವಾಜ್ಯ ಅಂಗಗಳು ಇರುತ್ತವೆ. ಒಂದು: ಕಳ್ಳರ ವ್ಯವಸ್ಥೆ. ಮತ್ತೊಂದು - ಪೋಲೀಸರದ್ದು. ಅಂಥದೇ ಒಂದು ವ್ಯವಸ್ಥೆ.
ಒಂದು ರಾತ್ರಿ ಪಾರ್ಥಸಾರಥಿ ಎಂಬವ ತನ್ನ ಸ್ನೇಹಿತನ ಮನೆಯಲ್ಲಿ ಓದಿಕೊಂಡು ಬರುತ್ತೇನೆಂದು ಹೊರಟ. ಕಂಬೈನ್ಡ್ ಸ್ಟಡಿ ಎಂದಮೇಲೆ ಕೇಳಬೇಕೇ? ಎಕನಾಮಿಕ್ಸ್ ಓದುವುದರೊಂದಿಗೆ ಸಿನೇಮಾ ಸಾಹಿತ್ಯಗಳ ಚರ್ಚೆಯೂ ನಡೆಯಿತು. ಎಲ್ಲಾ ಮುಗಿಯುವ ವೇಳೆಗೆ ರಾತ್ರೆ ತಡವಾಗಿತ್ತು.
ಮನೆಗೆ ಹೋಗುವ ದಾರಿಯಲ್ಲಿ ಪರ್ಥನ ಮೇಲೆ ಯಾರೋ ಬಿದ್ದರಂತೆ. ಇದ್ದದ್ದೆಲ್ಲಾ ದೋಚಿದರಂತೆ. ಪಾರ್ಥ ಗಂಡಾದ್ದರಿಂದ ಅವನ ರೇಪ್ ಆಗಲಿಲ್ಲವೆಂಬುದು ಅಂದಿನ ಘಟನೆಯ ಹೈಲೈಟ್. ನಿಮಗೆ ಗೊತ್ತೇ ಇರುತ್ತದೆ, ಏನೆಲ್ಲಾ ಆಗಿರಲಿಕ್ಕೆ ಸಾಧ್ಯ ಅಂತ.
ಮಾರನೆಯದಿನ ಓದಿಗೆಂದು ಪಾರ್ಥನನ್ನು ಅವನ ಸ್ನೇಹಿತ ಕರೆದ. ಸಂಜೆಯ ವೇಳೆಯಲ್ಲಿ ಬೆಚ್ಚಗೆ ಹೊದ್ದು ಮಲಗಿದ್ದ ಪಾರ್ಥನನ್ನು ನೋಡಿ ಸ್ನೇಹಿತನಿಗೆ ಕೋಪ ಉಕ್ಕಿತು. ಬೇಸಿಕಲಿ ಪುಕ್ಕಲು... ಆದ್ದರಿಂದ ನಾಟಕ ಹೂಡುತ್ತಾ ಇದ್ದಾನೆ ಎಂದಕೊಂಡು, ಹೊದಿಕೆ ಎಳೆದು... ‘ಬಾರೋ, ಪರವಾಗಿಲ್ಲ’ ಎಂದ.
‘ನಿಜವಾಗ್ಲೂ ಮೈಹುಷಾರಿಲ್ವೋ..’
‘ಏನೋ.. ಕಳ್ಳರ ಭಯವೇನೋ? ನಾನು ನಿನ್ನನ್ನ ಮನೇಲಿ ಬಿಟ್ಟು ಬರ್ತೇನೆ ಬಾರೋ.’
‘ಉಹುಂ...’
‘ಮತ್ತೆ? ದೆವ್ವದ ಭಯಾನಾ? ಅಥವಾ ನಿನ್ನನ್ನು ಕಳ್ಳಾಂತ ತಿಳ್ಕೊಂಡು ಜನ ತದಕ್ತಾರೆ ಅನ್ನೋ ಭಯಾನಾ?’
‘ಉಹೂಂ...’
‘ಮತ್ತೇ?’
‘ಪೋಲೀಸರ ಭಯ. ಕಳ್ಳರಾದ್ರೆ ದೋಚಿ ಬಿಟ್ಟುಬಿಡುತ್ತಾರೆ. ರಾತ್ರಿ ಮನೆಗೆ ಹೋಗಿ ಬೆಚ್ಚಗೆ ಮಲಗಬಹುದು. ಪೋಲೀಸರಾದ್ರೆ ದೋಚೋದಲ್ದೇ, ಠಾಣೇಲೂ ಕೂಡಿಹಾಕ್ತಾರೆ. ಅಲ್ಲಿ ಒಂದೇ ಸೊಳ್ಳೇ ಕಾಟಾ ಕಣೋ. ಕಾಯ್ಲ್ ಬೇರೇ ಇರೊಲ್ಲ.. ಆಮೇಲೆ ಬಂದಿರೋ ಮಲೇರಿಯಾ ಜಾಸ್ತಿ ಆದ್ರೆ?!!!!’
ಆಗಸ್ಟ್ ೧೯೮೭

ಒಂದೂರು. ಅಲ್ಲೊಂದು ಬಸವನ ಹುಳು ಇತ್ತು. ಅದನ್ನು ‘ಪ್ರಗತಿ’ ಎಂದು ಕರೆಯೋಣ.
ಪ್ರಗತಿ ಮುಂದೆ ಸಾಗುತ್ತಿತ್ತು. ಎಲ್ಲವೂ ಚೆನ್ನಾಗಿಯೇ ಇತ್ತು. ನಿಧಾನವಾಗಿಯಾದರೂ ಪ್ರಗತಿ ಮುಂದೆ ಹೋಗುತ್ತಿದೆಯಲ್ಲಾ ಎಂದು ಅದನ್ನು ನೋಡಿದವರು ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದರು.
ಒಂದು ದಿನ ಒಂದು ಗೋಸುಂಬೆ ಪ್ರಗತಿಯನ್ನು ನೋಡಿತು. ಅದಕ್ಕೇಕೋ ಪ್ರಗತಿಯನ್ನು ಕಂಡರೆ ವಿಸ್ಮಯವಾಗುತ್ತಿತ್ತು. ಅದರೊಂದಿಗೆ ಆಟವಾಡೋಣವೆನ್ನಿಸಿತು. ಜೊತೆಗೆ ಗೋಸುಂಬೆಗೆ ಸಂಶೋಧನಾದೃಷ್ಟಿ ಬೇರೆ!
ಗೋಸುಂಬೆ ಸುಮ್ಮನಿರಲಾರದೇ ಪಕ್ಕದೂರಿನ ಸಂತೆಗೆ ಹೋಯಿತು. ಅಲ್ಲಿದ್ದ ಶ್ರೀಸಾಮಾನ್ಯನೊಬ್ಬನ ಬಳಿ ‘ಅಧಿಕಾರ’ ಎಂದು ಮೇಲೆ ಬರೆದಿದ್ದ ತಗಡಿನ ಪೆಟ್ಟಿಗೆಯಿತ್ತು. ಗೋಸುಂಬೆ ಅವನ ಬಳಿ ವ್ಯಾಪಾರಕ್ಕಿಳಿಯಿತು. ಅವನಿಗೊಂದು ಪಂಚೆ, ಅವನ ಹೆಂಡತಿಗೊಂದು ನೂಲಿನ ಸೀರೆ ಮತ್ತು ಕುಡಿಯಲೊಂದಿಷ್ಟು ಸಾರಾಯಿ ಕೊಟ್ಟು ‘ಬಾರ್ಟರ್’ ವಿಧಾನದಲ್ಲಿ ಗೋಸುಂಬೆ ಆ ಪೆಟ್ಟಿಗೆಯನ್ನು ತೆಗೆದುಕೊಂಡಿತು.
ಊರಿಗೆ ಬಂದ ನಂತರ ಗೋಸುಂಬೆ ಆಸಕ್ತಿಯಿಂದ ಆ ಪೆಟ್ಟಿಗೆಯನ್ನು ತೆರೆದು ನೋಡಿತು. ಅದರಲ್ಲಿ ಒಂದು ಎಲಾಸ್ಟಿಕ್ ತುಂಡಿತ್ತು. ಗೋಸುಂಬೆ ಎಲಾಸ್ಟಿಕ್ ತುಂಡಿನ ಒಂದು ತುದಿಯನ್ನ ಪ್ರಗತಿಯ ಬಾಲಕ್ಕೆ ಕಟ್ಟಿತು. ಮತ್ತೊಂದು ತುದಿಯನ್ನು ಪಕ್ಕದಲ್ಲಿದ್ದ ಒಣಗಿ ತುಕ್ಕುಹಿಡಿದ ನೀರು ಸರಬರಾಜು ಪೈಪಿಗೆ ಕಟ್ಟಿಬಿಟ್ಟಿತು.
ಅಂದಿನಿಂದ ಪ್ರಗತಿ ಎಲಾಸ್ಟಿಕ್ ಎಳೆಯುತ್ತಾ ಮುಂದೆ ಸಾಗುವುದು, ಸ್ವಲ್ಪ ಹೊತ್ತಾದ ಮೇಲೆ ತಿರುಗಿ ಮೊದಲ ಸ್ಥಾನಕ್ಕೇ ಠಪ್ ಎಂದು ಹಿಂದಿರುಗುವುದೂ ಮಾಡುತ್ತಿದೆ. ಪಕ್ಕದೂರಿನ ಶ್ರೀಸಾಮಾನ್ಯನ ಬಳಿ ಮತ್ತೊಂದು ವಸ್ತು ಇದೆ. ಅದು ಕತ್ತರಿ. ಅವನಿಗೆ ಈ ಅವಸ್ಥೆ ನೋಡಲಾಗುತ್ತಿಲ್ಲ. ಆ ಎಲಾಸ್ಟಿಕ್ ತುಂಡನ್ನು ಕತ್ತರಿಸಬೇಕೆಂದು ಅಂದಿನಿಂದ ಕಾಯುತ್ತಿದ್ದಾನೆ. ಗೋಸುಂಬೆ ಅಲ್ಲೇ ಒಂದು ಕುರ್ಚಿಯಲ್ಲೀ ಪಟ್ಟಾಗಿ ಕೂತು ಪ್ರಗತಿಗಾಗುತ್ತಿರುವ ಗತಿ ಕಂಡು ವಿಕೃತಾನಂದ ಪಡೆಯುತ್ತಿದ್ದಾನೆ. ಹಾಗೇ ಅವನು ಕುರ್ಚಿಯ ಕಾವಲು ಕಾಯುತ್ತಿದ್ದಾನೆ.
ಗೋಸುಂಬೆ ಅಲ್ಲಿಂದ ಎದ್ದರೆ ಎಲಾಸ್ಟಿಕ್ ಕತ್ತರಿಸಬಹುದು. ಎಲಾಸ್ಟಿಕ್ ತುಂಡಾದರೆ ಗೋಸುಂಬೆ ಏಳುತ್ತಾನೆ. ಹೀಗೆ ಇದೊಂದು ವಿಷ ವೃತ್ತವಾಗಿದೆ.
ಆಗಸ್ಟ್ ೧೯೮೭

ಒಬ್ಬ ಹುಡುಗ
ಒಬ್ಬಳು ಹುಡುಗಿ
ಇಬ್ಬರೂ ಭೇಟಿಯಾದರು
ಅವನೊಬ್ಬ ಕವಿ. ಅವಳ ಕವಯತ್ರಿ.
ಒಬ್ಬರನ್ನೊಬ್ಬರು ನೋಡಿಕೊಂಡರು. ಭಾವನೆಗಳು ಉಕ್ಕಿದುವು.
“ನಾನು ನಿನ್ನನ್ನು ಪ್ರೇಮಿಸುತ್ತೇನೆ” ಎಂದಳು.
“ಒಂದಕ್ಕೆರಡು” ಎಂದ, ನಮಸ್ಕಾರದ ಅಭ್ಯಾಸವಿದ್ದ ಗಡ್ಡಧಾರಿ.
ಪ್ರಥಮ ನೋಟದ ಪ್ರೇಮ ಎಂದು ಅರ್ಥೈಸಿದರು ಇಬ್ಬರೂ.
ನಂತರ ಒಂದು ದಿನ ಒಂದು ದುರಂತ ನಡೆಯಿತು.
ಇಬ್ಬರೂ ಮದುವೆಯಾದರು. ಕೆಲದಿನಗಳಲ್ಲೇ ಒಬ್ಬ ಪುತ್ರನೂ ಪ್ರಾಪ್ತನಾದ.
ಮುಂದೆ.....
“ಇವನು ನಮ್ಮ ಪ್ರೇಮದ ಸಂಕೇತ” ಮಗನನ್ನು ಮುದ್ದಿಸುತ್ತಾ ಆತ ಹೇಳಿದ. ಕವಿಯಾದ್ದರಿಂದ ಎಲ್ಲೆಲ್ಲೂ ಸಂಕೇತಗಳನ್ನು ಬಳಸುವ ಅಭ್ಯಾಸ ಅವನಿಗೆ.
ಅವಳು ತಾಳಿಯನ್ನೊಮ್ಮೆ ಮುಟ್ಟಿ ನೋಡಿಕೊಂಡಳು. ಹೇಳಲೋ ಬೇಡವೋ ಎಂಬಂತೆ ತಲೆಕೆರೆದುಕೊಂಡು ಅತ್ತ ಇತ್ತ ದಿಟ್ಟಿಸಿದಳು. ತಾಳಿಯನ್ನು ಬ್ಲೌಸಿನಿಂದಾಚೆ ಎಳೆದು ಹೇಳಿಯೇ ಬಿಟ್ಟಳು..
“ಇದು ನಿನ್ನನ್ನು ಪ್ರೀತಿಸಿದ ನನ್ನ ಮೂರ್ಖತನದ ಸಂಕೇತ.”
ಅಂದು ಸಂಜೆಯಿಡೀ ಅವರು ಆ ವಿಷಯದ ಬಗ್ಗೆಯೇ ಚರ್ಚಿಸಿ ಜಗಳ ಆಡಿದರು. ರಾತ್ರಿ ಉಂಡು ಮಲಗಿದರು.
ಅಂದಿನ ಘಟನೆ ಮತ್ತೊಂದು ಕೂಸಿನ ಆಗಮನದ ಸಂಕೇತ ಎಂದು ಅವರಿಗೆ ಅಂದು ತಿಳಿದಿರಲೇ ಇಲ್ಲ!!
ಆಗಸ್ಟ್, ೧೯೮೬

ಅದೊಂದು ಕಾಗದದ ಕಾರ್ಖಾನೆ.
ದಪ್ಪ ಕಾಗದದ ಒಂದು ಬಂಡಲ್ ಇನ್ನೊಂದರೊಂದಿಗೆ ಮಾತಾಡುತ್ತಿತ್ತು
“ವಿಪರೀತವಾಗಿ ಮೈ ಬಂದುಬಿಟ್ಟಿದೆ ಇಳಿಸಬೇಕು”
“ಛೆ ಛೆ ಆ ಮೂರ್ಖತನ ಮಾತ್ರ ಮಾಡಬೇಡ.”
“ಯಾಕೆ? ಮಾನವರಲ್ಲಿ ಅದರಲ್ಲೂ ಹೆಂಗಸರಲ್ಲಿ ಬೊಜ್ಜಿಳಿಸುವುದ್ ಫ್ಯಾಷನ್ ಆಗಿದೆಯಲ್ಲಾ.. ಎಲ್ಲೆಲ್ಲೂ ಸ್ಲಿಮಿಂಗ್ ಸೆಂಟರುಗಳು, ಜಿಮ್ಮುಗಳು.. ಇತ್ಯಾದಿ..”
“ಒಂದು ಕಥೆ ಹೇಳ್ತೇನೆ ಕೇಳು, ಇದು ನಮ್ಮ ನಿಮ್ಮಮ್ಮನ ಕಾಲದ್ದು. ಹೀಗೇ ನಿಮ್ಮಮ್ಮ ಸಹ ಬೊಜ್ಜಿಳಿಸಬೇಕೂಂತ ಒದ್ದಾಡಿದ್ಲು”
“ಆಮೇಲೆ?”
“ನಮ್ಮಮ್ಮ ಹಾಗಲ್ಲ, ಯಾವ ಯೋಚನೆಯೂ ಇಲ್ಲದೇ ಆರಾಮವಾಗಿ ಇದ್ಲು.”
“ಮುಂದೇನಾಯ್ತು?”
“ನಮ್ಮಮ್ಮನ್ನ ನಾಸಿಕಕ್ಕೆ ಕರ್ಕೊಂಡು ಹೋದ್ರು. ಅವಳನ್ನ ನೂರು ರೂಪಾಯಿ ನೋಟಾಗಿ ಛಾಪಿಸಿದರು.”
“ಸರಿ... ಆದ್ರೇನು?”
“ಕೇಳು ಹೇಳೋದನ್ನ.. ಅವಳಿನ್ನೂ ಬದುಕಿದ್ದಾಳೆ. ಚಿರಂಜೀವಿ ಅವಳು. ಅವಳ ಕಿಮ್ಮತ್ತು ಇಂದಿಗೂ ಒಂದು ಪೈಸೆ ಸಹ ಇಳಿದಿಲ್ಲ.”
“ನಮ್ಮಮ್ಮ?”
“ನಿಮ್ಮಮ್ಮ ತೆಳುವಾದಳು. ಆದಳು. ಆಗುತ್ತಲೇ ಹೋದಳು.”
“ಆಮೇಲೇನಾಯ್ತು?”
“ಅವಳನ್ನು ಒಂದು ಫೈವ್ ಸ್ಟಾರ್ ಹೊಟೇಲಿಗೆ ಕೊಂಡೊಯ್ದರು. ಟಾಯ್ಲೆಟ್ನಲ್ಲಿಟ್ಟು ಟಿಷ್ಯೂ ಅಂತ ಕರೆದರು. ಕಡೆಗೊಂದು ದಿನ ಯಾರೋ ಬಿಳಿ ಚರ್ಮದವನು ಉಪಯೋಗಿಸಿ ಫ್ಲಷ್ ಮಾಡಿಬಿಟ್ಟ.”
“ಅಯ್ಯಯ್ಯೋ..!”
“ಈ ಕಥೆಯ ನೀತಿ ಗೊತ್ತಾಯ್ತಾ?”
“ಏನು?”‘
“ಎಲ್ಲಕ್ಕೂ ನೀನು ಮಾನವರನ್ನು ಮಾದರಿಯಾಗಿ ತೆಗೊಳ್ಬೇಡ.”
ಆಗಸ್ಟ್ ೧೯೮೬

ನಿಮಗೆ ಸತ್ಯನನ್ನು ನೇಣಿಗೇರಿಸಿದ ಕಥೆ ಗೊತ್ತಿಲ್ಲವೇ? ಹೇಗೆ ತಿಳಿದೀತು ಪಾಪ! ಅದನ್ನ ನನ್ನ ಅಡಗೂಲಜ್ಜಿಯಾಗಲೀ ನಿಮ್ಮ ಅಡುಗೂಲಜ್ಜಿಯಾಗಲೀ ಹೇಳಿರಲಿಕ್ಕೆ ಸಾಧ್ಯವಿಲ್ಲ. ಇದು ಇತ್ತೀಚೆಗೆ ನಡೆದದ್ದು. ಗಾಂಧಿಯ ಸಾವಿನ ನಂತರ -- ಅಂದರೆ ನಲವತ್ತೆಂಟರ ನಂತರೆ. ಹೇಳಲೇ..?
ಒಂದೂರು.
ಅಲ್ಲಿ ಸತ್ಯ ಮತ್ತು ಸುಳ್ಳ ಎಂದಿಬ್ಬರು ವಾಸವಾಗಿದ್ದರು.
ಒಂದು ದಿನ ಸುಳ್ಳ ಆವೇಶದಿಂದ ಹೇಳಿದ -
“ಸತ್ಯಮೇವ ಜಯತೇ” ಅದೇನೋ ಸತ್ಯನ ತಲೆಯ ಮೇಲೆ ಹೊಡೆದಂತಿತ್ತು ಪಾಪ!
ಸತ್ಯ ಏನು ಮಾಡುತ್ತಾನೆ? ಹೌದೇನೋ, ಇರಬಹುದೇನೋ ಎಂದು ನಂಬಿದ. ಅವನಿಗೇನು ಗೊತ್ತು ತನಗಿದು ಕಾಲವಲ್ಲ ಇದು ಕಲಿಗಾಲ, ತನಗೆ ಬ್ಯಾಡ್ ಟೈಮೂಂತ... ಕೋಲೆ ಬಸವನ ಹಾಗೆ ತಲೆ ಆಡಿಸಿ... ನಾನೇ ಗೆಲ್ತೇನೆ ಅನ್ನೋ ಬಿಮ್ಮಿನಲ್ಲಿ ಗಾಂಧಿಯ ವಿಗ್ರಹದ ಪಕ್ಕ ಹೋಗಿ ನಿಂತುಬಿಟ್ಟ.
ಆದರೆ ಜನ ಸುಮ್ಮನಿರುತ್ತಾರೆಯೇ? ತರಲೆಗಳು... ಯಾರೋ ಹೋಗಿ ನ್ಯಾಯನ ಬಳಿ ದೂರು ಕೊಟ್ಟರು. ಸತ್ಯ ಸುಳ್ಳನ್ನ ನಂಬಿದ್ದಾನೆ, ತಾನೇ ಗೆಲ್ಲೋದು ಅನ್ನೋ ಅಹಂಕಾರ ಬೇರೆ. ಸತ್ಯನ ಕೊಬ್ಬಿನ ಸಂಹಾರ ನಡೆಯಬೇಕು.
ನ್ಯಾಯ ಒಮ್ಮೆ ತೇಗಿದ. ಅವನ ಕಿವಿಗಳಿಗೆ “ಕೊಬ್ಬು” ಅನ್ನುವ ಶಬ್ದ ಕೇಳಲಿಲ್ಲ. ಆ ಶಬ್ದ ಅಷ್ಟು ದಪ್ಪ ಚರ್ಮದೊಳಗೆ ತೂರುವುದಾದರೂ ಹೇಗೆ? ವಿಚಾರಣೆ ನಡಸಿದಂತೆ ಮಾಡಿ ತೀರ್ಪು ಕೊಟ್ಟೇ ಬಿಟ್ಟ.......
“ಸತ್ಯ ಸುಳ್ಳನ್ನ ನಂಬಿ ದೇಶಕ್ಕೇ ಘೋರ ಅಪರಾಧ ಎಸಗಿದ್ದಾನೆ. ತಾನೇ ಗೆಲ್ಲುತ್ತೇನೆಂಬ ಜಯಾಂಧಕಾರದಲ್ಲಿ ಮುಳುಗಿರುವ ಸತ್ಯನಿಗೆ ಸತ್ಯದರ್ಶನ ಮಾಡಿಸಬೇಕು. ಪ್ರಿಯವಾದದ್ದು ಸತ್ಯವಲ್ಲ. ಸುಳ್ಳ ಹೇಳಿದ್ದು ಪ್ರಿಯ ಅಸತ್ಯ. ಆದ್ದರಿಂದ ಬೇಜವಾಬ್ದಾರಿಯಾಗಿ ವರ್ತಿಸಿದ ಸತ್ಯನಿಗೆ ಮರಣದಂಡನೆ.”
ಪಾಪ! ಸತ್ಯ ಎಲ್ಲೆಲ್ಲೋ ಅಹವಾಲು ಹೇಳಿಕೊಂಡ. ರಾಷ್ಟ್ರಪತಿಯ ದಯಾಭಿಕ್ಷೆಯೂ ದೊರೆಯಲಿಲ್ಲ. ನ್ಯಾಯ ಖುದ್ದಾಗಿ ಅವನನ್ನು ನೇಣು ಹಾಕಿದ. ಮತ್ತೆ ಖಾತ್ರಿಪಡಿಸಿಕೊಳ್ಳಲು ಸತ್ತೆಯಾ? ಎಂದ ಕೇಳಿದ. ‘ಅ’ಕಾರಾಂತ ಪುಲ್ಲಿಂದವಿದ್ದ ಸತ್ಯ ಈಗ ‘ಆ’ಕಾರಾಂತ ನಪುಂಸಕಲಿಂಗವಾಗಿದೆ... ಅದಕ್ಕೇ ಈ ನಡುವೆ ಜನ ‘ಸತ್ಯ’ ಎನ್ನುವುದಕ್ಕೆ ಬದಲು ‘ಸತ್ಯಾ?’ ಎಂದು ಕೇಳುತ್ತಿದ್ದಾರೆ. ಇನ್ನೂ ಬದುಕಿದ್ದಾನೆ ಸತ್ಯ ಅರೆಜೀವವಾಗಿ!
ನ್ಯಾಯ ಮಾತ್ರ ಇಂದಿಗೂ ಸತ್ಯಾ ಸತ್ಯಾ ಎಂದು ಹೊಡೆದುಕೊಳ್ಳುತ್ತಿದ್ದಾನೆ.. ಹೀಗೆ ಈ ಕಥೆ ಇನ್ನೂ ಮುಗಿದಿಲ್ಲ.
ಅಕ್ಟೋಬರ್ ೧೯೮೬
“ನೀವು ರೋಜಾ ಹೂವನ್ನು ಬೇರಾವ ಹೆಸರಿನಿಂದ ಕರೆದರೂ ಅದು ರೋಜಾಹೂವೇ ಆಗಿರುತ್ತೆ”... ಶೇಕ್ಸ್ಪಿಯರನೇ ಹೀಗೆ ಹೇಳಿದ್ದಾನೆ. ಆಫ್ಟರಾಲ್ ಹೆಸರಿನಲ್ಲೇನಿದೆ? ಎಂಬ ಹಮ್ಮಿನಲ್ಲಿ ಒಂದು ಮುಂಜಾನೆಯ ಮಂಜಿನಲ್ಲಿ ಗುಲಾಬಿ ತಲೆ ಎತ್ತಿ ನಿಂತಿದ್ದಳು.
ಅವಳ ಆನಂದ ನೋಡಿ ಸಹಿಸದ ಕೆಳಗಿದ್ದ ಮುಳ್ಳು ಹೇಳಿದ:
“ನೀನು ಇಷ್ಟು ಅಂದವಾಗಿರಲು ನಿನ್ನನ್ನ ಕಾಪಾಡ್ತಾ ಇರೋ ನಾನೇ ಕಾರಣ”
ಗುಲಾಬಿ ಎಷ್ಟಾದರೂ ಅಂದಗಾತಿ. ಜತೆಗೆ ಹೆಣ್ಣಿಗೆ ಸಹಜವಾದ ಅಹಂಕಾರ ಬೇರೆ...
“ಹೌದು ಹ್ಯಾಪಮೋರೆಯ ಮಹಾಗಂಡು ನೀನು.. ನನ್ನನ್ನ ರಕ್ಷಿಸುತ್ತೀ..”
“ನೋಡು ನಿನಗೆ ತಿಳೀದೇ ಮಕರಂದಗಳೆಂಬ ರೋಡ್ ರೋಮಿಯೋಗಳು ಹೇಗೆ ಹೀರ್ತಿದ್ದಾರೆ... ಬಿಮ್ಮನೆ ಕೂತಿದ್ದೀಯಲ್ಲಾ?”
“ಅವರೇನೂ ನನ್ನನ್ನ ಅಂದಗೆಡಿಸಿ ರೇಪ್ ಮಾಡ್ತಾಯಿಲ್ಲವಲ್ಲ! ಬರೇ ನೋಡ್ತಾರೆ ತಾನೆ, ... ಹೀರ್ತಾರೆ ತಾನೆ? ನನ್ನನ್ನೇನೂ ಹೊತ್ಕೊಂಡು ಹೋಗೊಲ್ವಲ್ಲ? ಆ ಧೈರ್ಯ ಯಾರಾದರೂ ಮಾಡಲಿ ನೋಡೋಣ..”
ಮುಳ್ಳಿನ ಉಪನ್ಯಾಸ ಪ್ರಾರಂಭವಾಗುತ್ತಿದ್ದ ಹಾಗೇ ಅಲ್ಲಿಗೆ ಶೇಕ್ಸ್ಪಿಯರನ ಮತ್ತೊಂದು ಸೃಷ್ಟಿ ಜ್ಯೂಲಿಯಟ್ ಬಂದಿದ್ದಳು. ಗುಲಾಬಿ ಇನ್ನೂ ಉಪನ್ಯಾಸ ಮೆಲುಕು ಹಾಕುವ ಮತ್ತಿನಲ್ಲಿದ್ದಳು. ಗುಲಾಬಿಯನ್ನು ಜೂಲಿಯಟ್ ನೋಡಿದಳು...
“ಓಹ್...ಎಷ್ಟು ಚೆನ್ನಾಗಿದೆ” ಎಂದವಳೇ ಗುಲಾಬಿಯನ್ನು ಕಿತ್ತು ಮುಡಿಗೇರಿಸಿಯೂ ಬಿಟ್ಟಳು.
ಗುಲಾಬಿಗೆ ಚಿವುಟಿದಂತಾಗಿ ಸ್ವಲ್ಪವೇ ಕಣ್ತೆರದಳು. ಜೂಲಿಯೆಟ್ಳನ್ನು ಒಮ್ಮೆ ದಿಟ್ಟಿಸಿ ನೋಡಿ..
“ಹ್ಹಂಹ್ ಹೆಣ್ಣಿಗೆ ಹೆಣ್ಣೇ ಶತ್ರು” ಎಂದು ನಿಟ್ಟುಸಿರಿಟ್ಟಳು.
ಆ ಕೂದಲ ರಾಶಿಯಲ್ಲಿ ಗುಲಾಬಿಯ ನಿಟ್ಟುಸಿರು ಯಾರಿಗೂ ಕೇಳಲೇ ಇಲ್ಲ.
ಅಕ್ಟೋಬರ್ ೧೯೮೬

ಮೊನ್ನೆ ಆಂಧ್ರಪ್ರದೇಶದಲ್ಲಿ ರಾಮರಾಯರ ಸರಕಾರ ಉರುಳಿಬಿದ್ದಾಗ, ಅಥವಾ ಅದನ್ನು ಉರುಳಿಸಿದಾಗ ಕೋಪಗೊಂಡವರು ಬಹಳ ಮಂದಿ. ದುಃಖಪಟ್ಟವರು ಇನ್ನಷ್ಟು. ಆದರೆ ಸಂತೋಷಗೊಂಡವರು ಇಲ್ಲವೇ? ಇದ್ದಾರೆ!! ಯಾವ ರಾಜಕೀಯ ಪಕ್ಷಕ್ಕೂ ಸೇರದ, ರಾಜಕೀಯದೊಂದಿಗೆ ಸಂಬಂಧವೇ ಇಲ್ಲದ ಒಬ್ಬ ವ್ಯಕ್ತಿ ಬಹಳ ಖುಷಿಯಾಗಿದ್ದ.
ಬನ್ನಿ ನಿಮಗೆ ಕೊಮುರಯ್ಯನ ಪರಿಚಯ ಮಾಡಿಸುತ್ತೇನೆ. ಕೊಮುರಯ್ಯ ಒಂದು ಮ್ಯಾಟಡಾರ್ ವ್ಯಾನಿನ ಮಾಲೀಕ. ಪೊತಂಗಲ್ನಿಂದ ಬೋಧನ್ಗೆ ಈ ವ್ಯಾನನ್ನು ಓಡಿಸುವುದೇ ಅವನ ವೃತ್ತಿ. ಅವನಂತೆಯೇ ವ್ಯಾನುಗಳನ್ನು ಓಡಿಸುವವರ ಒಂದು ಗುಂಪಿದೆ. ಅದಕ್ಕೆ ಅವನೇ ನಾಯಕ.
ಆಗಸ್ಟ ೧೬, ೧೯೮೪ - ಮಧ್ಯಾಹ್ನ ಪ್ರದೇಶ ಸಮಾಚಾರದಲ್ಲಿ ರಾಮರಾಯರ ಸರಕಾರ ಉರುಳಿದ, ಭಾಸ್ಕರರಾಯರ ಸರಕಾರ ಪ್ರಮಾಣವಚನ ಸ್ವೀಕರಿಸಿದ ಸುದ್ದಿ ಆಕಾಶವಾಣಿ ಬಿತ್ತರಿಸಿತು.ತಕ್ಷಣ ಕೊಮುರಯ್ಯನ ವ್ಯಾನು ಪೊತಂಗಲ್ನಿಂದ ಬೋಧನ್ಗಿದ್ದ ರೂಟನ್ನು ಲಂಬೀಕರಿಸಿ ನಿಜಾಮಾಬಾದ್ವರೆಗೂ ಹೋಗಲು ಅನುವಾಯಿತು. ಅವನ ಲಡಾಸು ವ್ಯಾನಿಗೆ ಡೀಜಲ್ ಟ್ಯಾಂಕೇ ಇರಲಿಲ್ಲ!! ಇಂಜಿನ್ ಪಕ್ಕದಲ್ಲಿದ್ದ ಸೀಮೆಎಣ್ಣೆ ಡಬ್ಬದಿಂದ ಎರಡು ಟ್ಯೂಬ್ಗಳಲ್ಲಿ ಇಂಜಿನ್ಗೆ ಕನೆಕ್ಷನ್ ನೀಡಲಾಗಿತ್ತು. ಆ ಡಬ್ಬಕ್ಕೇ ಹತ್ತು ಲೀಟರ್ ಡೀಜಲ್ ಸುರಿಸಿಕೊಂಡ.
ಸಾಮಾನ್ಯವಾಗಿ ಇದ್ದ ರೇಟು ಈ ರಾಜಕೀಯ ತಿರುವಿನೊಂದಿಗೆ ಹೆಚ್ಚಾಯಿತು. ಪೊತಂಗಲ್ನಿಂದ ೫ ರೂಪಾಯಿ, ರುದ್ರೂರ್ನಿಂದ ೪.೫೦, ಬೋಧನ್ನಿಂದ ೩.೫೦ ಆಯಿತು. ಬೇಕಿದ್ರೆ ಹತ್ತಿ ಇಲ್ಲವಾದರೆ ಬಿಡಿ ಅಂದ. ನಿಜಾಂಸಾಗರ್ನ ಅನೇಕ ಕಾಲುವೆಗಳು ಕೊಮುರಯ್ಯನಿಗೆ ವರದಾನವಾಗಿದ್ದವು. ದಾರಿಯಲ್ಲಿದ್ದ ಕಾಲುವೆಗಳ ಬಳಿಯಲ್ಲೆಲ್ಲಾ ನಿಲ್ಲಿಸಿ ರೇಡಿಯೇಟರ್ಗೆ ನೀರು ಸುರಿದುಕೊಳ್ಳುತ್ತಾ ವ್ಯಾನ್ ಸ್ಪೀಡಾಗಿ ಓಡಾಡಿಬಿಟ್ಟಿತು.
ತೆಲುಗುದೇಶಂನ ದೊಡ್ಡಕುಳಗಳಿಗೆ ರಾಜದೂತ್ನ ಕಾರ್ಬುರೇಟರ್ ಹಾಕಿದ ಅವರದೇ ಸ್ವಂತ ಬುಲೆಟ್ಗಳಿದ್ದುವು. ಆದರೆ ಸಣ್ಣ ಕಾರ್ಯಕರ್ತರು ನಿಜಾಮಾಬಾದಿಗೆ ಹೋಗಲೇಬೇಕಲ್ಲ? ವಿರೋಧ ಪಕ್ಷಗಳ ಸಂಯುಕ್ತ ಸಭೆಗೆ ಹಾಜರಿ ಹಾಕಲೇಬೇಕು. ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಲೇಬೇಕು. ಮಾರನೆಯ ದಿನದ ಬಂದ್ ಜಯಪ್ರದವಾಗಿ ನಡೆಯುವಂತೆ ನೋಡಿಕೊಳ್ಳಬೇಕು.
ವ್ಯಾನಿನ ಮುಂದಿನ ಸೀಟಿನಲ್ಲಿ ಕೊಮುರಯ್ಯನ ಮೆಹರ್ಬಾನಿಯಿಂದ ಠೀವಿಯಾಗಿ ಬೈಠಾಯಿಸಿದ್ದ ಕರಣಂ ಶ್ರೀನಿವಾಸಂನನ್ನು ಕೇಳಿದ - “ನಾಳೆ ಬಂದ್ ಆದ್ರೆ ನಮ್ಮ ವ್ಯಾನೂ ಓಡಾಡೋದಿಕ್ಕೆ ಆಗಲ್ವಾ?”
“ಸಾಧ್ಯವೇ ಇಲ್ಲ. ನಾಳಿನ ಬಂದ್ ಮಾತ್ರ ಸಂಪೂರ್ಣವಾಗಿ ಇರುತ್ತೆ.”
“ಹಾಗಾದ್ರೆ ಬಂದ್ ಎಲ್ಲಾ ಕಡೆ ಆಗಬೇಕಾದ್ರೆ ಏನ್ ಮಾಡ್ತೀರಾ ಸರ್? ಎಲ್ಲಾಕಡೇನೂ ಹೋಗಿ ನೀವು ನಾಯಕರು ನಿಗಾ ಇಟ್ಟು ಮುಚ್ಚಿಸಿದರೆ ತಾನೇ ಬಂದ್ ಸರಿಯಾಗಿ ನಡೆಯೋದು? ಅನ್ನಗಾರಿ ಸರಕಾರವನ್ನು ಕಿತ್ತು ಹಾಕಿದ್ದಕ್ಕೆ ನನಗೂ ಕೋಪ ಇದೆ. ನೋಡಿ, ಬೇಕಿದ್ರೆ ನನ್ ವ್ಯಾನು ಓಡಿಸ್ತೀನಿ. ನಿಮ್ಮವರೆಲ್ಲಾ ಇದ್ರಲ್ ಕೂತ್ಕೊಂಡ್ರೆ - ನಿಜಾಮಾಬಾದ್, ಎಡಪಲ್ಲಿ, ಬೋಧನ್, ರುದ್ರೂರ್, ಪೆಂಟಖುರ್ದ್, ಕೋಟಗಿರಿ, ಕೊಲ್ಲೂರ್, ಸುಂಕಿನಿ, ಪೊತಂಗಲ್.. ಯಾಕೆ ಕಡೆಗೆ ಕಲ್ಲೂರಲ್ಲೂ ಬಂದ್ ಆಗೋಹಾಗೆ ನೋಡಿಕೋಬಹುದು. ಬೇಕಿದ್ರೆ ನನ್ನ ಕ್ಲೀನರ್ಗಳನ್ನೂ ಕಳಿಸಿಬಿಡ್ತೀನಿ.. ಡೀಜಲ್ ಖರ್ಚಿನ ಮೇಲೆ ೫೦ ಕೊಟ್ಟರೆ ಸಾಕು.”
“ಪರವಾಗಿಲ್ಲಾ ಐಡಿಯಾ ಚೆನ್ನಾಗಿದೆ. ಎಲ್ಲಾ ಕಡೇನೂ ವ್ಯಾನ್ ಓಡಿಸ್ತೀನಿ ಅಂತಾ ಇದೀಯ... ಈ ವಿಷಯ ಮೀಟಿಂಗ್ನಲ್ಲಿ ಹೇಳ್ತೀನಿ. ನೋಡೋಣ.”
ಆಗಸ್ಟ್ ೧೭, ೧೯೮೪ - ಬಂದ್ ಬಹಳ ಮಟ್ಟಿಗೆ ಶಾಂತಯುತವಾಗಿ ನಡೆಯಿತು. ಎಲ್ಲೂ ಹಿಂಸಾಚಾರದ ಘಟನೆಗಳು ವರದಿಯಾಗಲಿಲ್ಲ. ಆ ಪ್ರಾಂತದ ಜನ ಅಂದು ಊಟ ಬಿಟ್ಟರೆ ನಡೆಸಿದ ಚಟುವಟಿಕೆ ಎಂದರೆ - ಪ್ರದೇಶ ಸಮಾಚಾರ ಹಾಗೂ ವಾರ್ತೆಗಳನ್ನು ಕೇಳಿದ್ದು. ವ್ಯಾನುಗಳು, ಬಸ್ಸು, ರೈಲು, ಕಡೆಗೆ ಕೆಲ ಖಾಸಗೀ ವಾಹನಗಳೂ ರಸ್ತೆಯ ಮೇಲೆ ಬರುವ ಧೈರ್ಯ ಮಾಡಲಿಲ್ಲ. ಕೊಮುರಯ್ಯನ ವ್ಯಾನು ಮಾತ್ರ ಹಾಯಾಗಿ, ಸ್ವೇಚ್ಛೆಯಿಂದ ರುದ್ರೂರ್, ಬೋಧನ್, ಪೊತಂಗಲ್ ಪ್ರಾಂತ್ಯಗಳಲ್ಲಿ ಓಡಾಡಿತು.
ಸಂಜೆ ಪ್ರಾದೇಶಿಕ ಸಮಾಚಾರದ ನಂತರ ಕೆಲ ವಿಪ್ಲವಾತ್ಮಕ ವಿದ್ಯಾರ್ಥಿಗಳು ರಾಜಕೀಯ ಚರ್ಚಿಸುತ್ತಾ ನಿಂತಿದ್ದರು. ಅನಂತಪುರದಲ್ಲಿ ನಡೆದ ಗಲಭೆಗಳನ್ನು ಮೆಚ್ಚಿ ಅವರು ಮಾತಾಡುತ್ತಿದ್ದರು. ಕೊಮುರಯ್ಯ ಕೂಡಾ ಅಲ್ಲೇ ನಿಂತಿದ್ದ. ಈ ವಿದ್ಯಾರ್ಥಿಗಳೇ ಅಲ್ಲವೆ ತನ್ನ ವ್ಯಾನಿನಲ್ಲಿ ಓಡಾಡಿ ಬಂದ್ ಜಯಪ್ರದವಾಗುವಂತೆ ನೋಡಿಕೊಂಡದ್ದು?
ಕೊಮುರಯ್ಯ ಅವರ ವಿಚಾರಗಳಿಗೆ ತನ್ನ ಕೈಲಾದ ಕಾಣಿಕೆಯನ್ನು ನೀಡಿದ. “ಇವರನ್ನು ಹೀಗೇ ಬಿಟ್ರೆ ಆಗದು. ನಾಳೆ ಬೋಧನ್ನಿಂದ ಒಂದೂ ಆರ್.ಟಿ.ಸಿ. ಬಸ್ ಹೋಗದಂತೆ ನೋಡಿಕೊಂಡರೆ ಸ್ವಲ್ಪ ಚುರುಕು ಮುಟ್ಟುತ್ತೆ. ನೋಡಿ, ಬೋಧನ್ ಸ್ಟಾಂಡಿಗೆ ಬರುವ ಪ್ರತಿ ಬಸ್ನ ಟೈರಿನಿಂದ ಗಾಳಿ ತೆಗೆದು ಬಿಡೋಣ. ಮತ್ತೆ ಡಿಪೋದಿಂದ ಬೇರೆ ಚಕ್ರಗಳು ಬರೋತನಕ, ಇವು ಮುಂದಕ್ಕೆ ಹೋಗೋದಕ್ಕೆ ಸಾಧ್ಯವಿಲ್ಲ. ನಿಜಾಮಾಬಾದ್ ಡಿಪೋದವರಿಗಿರೋ ತೊಂದರೆಗಳ ಮಧ್ಯ ಇವರಿಗೆ ಟೈರುಗಳನ್ನ ಕಳಿಸೋಷ್ಟರಲ್ಲಿ ಸಂಜೆ ಆಗಿಬಿಡುತ್ತೆ. ಬೆಳಿಗ್ಗೆ ಒಂದು ಘಂಟೆಕಾಲ ನಾವು ಚುರುಕಾಗಿದ್ದರೆ ಆ ನಂತರ ಬಸ್ಸುಗಳು ಬಂದ್ ಆದ ಹಾಗೇನೇ..”
ಆಗಸ್ಟ್ ೧೮, ೧೯೮೪ - ಬೆಳಿಗ್ಗೆ ಹೈದರಾಬಾದಿಗೆ ಹೊರಡಬೇಕಿದ್ದ ಸಿದ್ದಿರಾಂರೆಡ್ಡಿಯವರು ಪೊತಂಗಲ್ ಬಸ್ ನಿಲ್ದಾಣಕ್ಕೆ ಬಂದಾಗ ಕೆಲ ಪ್ರಯಾಣಿಕರನ್ನು ಕೂಡಿಸಿಕೊಂಡು ಕೊಮುರಯ್ಯನ ವ್ಯಾನು ಗೂಳಿ ನುಗ್ಗುವಂತೆ ನುಗ್ಗಲು ತಯಾರಾಗಿ ನಿಂತಿತ್ತು.
“ಏನು ಕೊಮುರಯ್ಯ ಬೋಧನ್ನಿಂದ ಬಸ್ಸು ನಡೀತಾ ಇದೆಯಾ?”
“ಏನೋ, ಬೆಳಿಗ್ಗೆ ಬಂದ ಹಾಗಿತ್ತು ಸರ್. ಹೈದರಾಬಾದಿನ ಬಸ್ ನಡೀತಾ ಇದೆ ಅಂದ್ರು. ಬನ್ನಿ ಕೂತ್ಕೊಳ್ಳಿ. ಈವತ್ತು ಬೊಧನ್ಗೆ ೨.೫೦ ಚಾರ್ಜು.”
“ಎಲ್ಲಾ ಕಳ್ರೇ. ಅವಕಾಶ ಸಿಕ್ಕಿದರೆ ಬೆಲೆ ಜಾಸ್ತಿ ಮಾಡಿಬಿಡೋದು.” ಗೊಣಗಿಕೊಳ್ಳುತ್ತಾ ಸಿದ್ದಿರಾಂರೆಡ್ಡಿ ಕುಳಿತುಕೊಂಡರು.
ಬೊಧನ್ ಬಸ್ ನಿಲ್ದಾಣದಲ್ಲಿ ಮತ್ತೆ ಕೊಮುರಯ್ಯನದೇ ಆರ್ಭಟ.. “ಯಾರ್ರೀ ನಿಜಾಮಾಬಾದ್, ನಿಜಾಮಾಬಾದ್...”
ಮತ್ಯಾರೋ ಮಹಾನುಭಾವರು ಬಂದು ಕೇಳಿದರು: “ಅಲ್ಲಿಂದ ಹೈದರಾಬಾದಿಗೆ ಬಸ್ಸಿದೆಯೇನಪ್ಪಾ?”
“ಕಾಮಾರೆಡ್ಡಿ ರೂಟ್ ಮೇಲೆ ಇರಬಹುದು ಸರ್. ಬನ್ನಿ ನಿಜಾಮಾಬಾದ್ಗೆ ೩.೫೦ ಮಾತ್ರ.”
ಇಳಿದು ಹೋಗಿದ್ದ ಸಿದ್ದಿರಾಂರೆಡ್ಡಿಯವರೂ ಸಹ ಬಂದು ಕುಳಿತುಕೊಂಡರು. ನಿಜಾಮಾಬಾದ್ ತಲುಪಿದ ಮೇಲೆ ಮತ್ತೆ ಪ್ರಾರಂಭವಾಯುತು.. “ಯಾರ್ರೀ ಬೋಧನ್, ಬೋಧನ್, ಬೊಧನ್....”
ಮತ್ತೊಬ್ಬ ಮಹಾನುಭಾವ ಕೇಳಿದ - “ಮೆದಕ್ ರೂಟಿನ ಮೇಲೆ ಹೈದರಾಬಾದಿಗೆ ಬಸ್ಸುಗಳು ನಡೀತಾ ಇದೆಯಾ?”
“ಗೊತ್ತಿಲ ಸರ್. ಕಾಮಾರೆಡ್ಡಿ ರೂಟ್ ಮೇಲೆ ಧರ್ಮಾರಂನಲ್ಲಿ ಗಲಾಟೆ ನಡೀತಾ ಇದೇಂತ ಹೇಳಿದ್ರು. ಬೋಧನ್ ಕಡೆ ಬಸ್ಸುಗಳು ಓಡಾಡ್ತಾ ಇದ್ದಹಾಗಿತ್ತು. ಬನ್ನಿ ಬರೇ ೩.೫೦ ರೂಪಾಯಿ.”
ಬೋಧನ್ನಲ್ಲಿ ಗಾಳಿ ಬಿಚ್ಚಿಸಿಕೊಂಡ ನಾಲ್ಕು ಬಸ್ಸುಗಳು ಅನಾಥವಾಗಿ ನಿಂತಿದ್ದುವು. ಕೊಮುರಯ್ಯನ ಲಡಾಸು ವ್ಯಾನು ಆರಾಮವಾಗಿ ಆರೋಗ್ಯಕರವಾಗಿ ಓಡಾಡಿಕೊಂಡಿತ್ತು.
ಕೊನೆಯ ಮಾತು -
ಈ ಘಟನೆಗಳು ನಡೆದ ನಂತರವೂ ಕೊಮುರಯ್ಯ ಆರಾಮವಾಗಿ ತನ್ನ ವ್ಯಾನನ್ನು ಓಡಾಡಿಸಿಕೊಂಡಿದ್ದಾನೆ. ಗಲಾಟೆ ಮಾಡಿ ಬಸ್ಸಿನ ಚಕ್ರಕ್ಕೆ ಗಾಳಿ ಬಿಚ್ಚಿದವರೆಲ್ಲ ಜೈಲಿನ ಕಂಬಿ ಎಣಿಸಿದರು. ಈಗ್ಗೆ ಇದು ನಡೆದ ನಂತರ ಎರಡು ಬಂದ್ ನಡೆದಿವೆ - ಆಂಧ್ರಪ್ರದೇಶ್ ಬಂದ್, ಭಾರತ್ ಬಂದ್. ಬಂದ್ ನಡೆದಾಗ, ಮತ್ತು ನಂತರದ ಎರಡು ದಿನ ನಿಜಾಮಾಬಾದ್ ಡಿಪೋದಿಂದ ಬೋಧನ್ ಕಡೆಗೆ ಆರ್.ಟಿ.ಸಿ. ಬಸ್ಸುಗಳ ಸಂಚಾರ ನಿಂತು ಹೋಗುತ್ತದೆ. ಕೊಮುರಯ್ಯನ ಲಡಾಸು ಗಾಡಿ ಭಾಗ್ಯಲಕ್ಷ್ಮೀ ಲಾಟರಿಯಾಗಿ ಪರಿವರ್ತನೆಗೊಳ್ಳಬಹುದೆಂದು ಕೆಲದಿನಗಳ ಹಿಂದೆ ಅದನ್ನು ಕೊಂಡುಕೊಂಡಾಗ ಬಹುಶಃ ಅವನೇ ಊಹಿಸಿರಲಿಲ್ಲವೇನೋ!!!!!!!!!!!!!!
ಆಗಸ್ಟ್, ೧೯೮೪