Tuesday, June 17, 2008

ಶತ್ರು



“ನೀವು ರೋಜಾ ಹೂವನ್ನು ಬೇರಾವ ಹೆಸರಿನಿಂದ ಕರೆದರೂ ಅದು ರೋಜಾಹೂವೇ ಆಗಿರುತ್ತೆ”... ಶೇಕ್ಸ್‌ಪಿಯರನೇ ಹೀಗೆ ಹೇಳಿದ್ದಾನೆ. ಆಫ್ಟರಾಲ್ ಹೆಸರಿನಲ್ಲೇನಿದೆ? ಎಂಬ ಹಮ್ಮಿನಲ್ಲಿ ಒಂದು ಮುಂಜಾನೆಯ ಮಂಜಿನಲ್ಲಿ ಗುಲಾಬಿ ತಲೆ ಎತ್ತಿ ನಿಂತಿದ್ದಳು.

ಅವಳ ಆನಂದ ನೋಡಿ ಸಹಿಸದ ಕೆಳಗಿದ್ದ ಮುಳ್ಳು ಹೇಳಿದ:
“ನೀನು ಇಷ್ಟು ಅಂದವಾಗಿರಲು ನಿನ್ನನ್ನ ಕಾಪಾಡ್ತಾ ಇರೋ ನಾನೇ ಕಾರಣ”

ಗುಲಾಬಿ ಎಷ್ಟಾದರೂ ಅಂದಗಾತಿ. ಜತೆಗೆ ಹೆಣ್ಣಿಗೆ ಸಹಜವಾದ ಅಹಂಕಾರ ಬೇರೆ...
“ಹೌದು ಹ್ಯಾಪಮೋರೆಯ ಮಹಾಗಂಡು ನೀನು.. ನನ್ನನ್ನ ರಕ್ಷಿಸುತ್ತೀ..”
“ನೋಡು ನಿನಗೆ ತಿಳೀದೇ ಮಕರಂದಗಳೆಂಬ ರೋಡ್ ರೋಮಿಯೋಗಳು ಹೇಗೆ ಹೀರ್‍ತಿದ್ದಾರೆ... ಬಿಮ್ಮನೆ ಕೂತಿದ್ದೀಯಲ್ಲಾ?”
“ಅವರೇನೂ ನನ್ನನ್ನ ಅಂದಗೆಡಿಸಿ ರೇಪ್ ಮಾಡ್ತಾಯಿಲ್ಲವಲ್ಲ! ಬರೇ ನೋಡ್ತಾರೆ ತಾನೆ, ... ಹೀರ್‍ತಾರೆ ತಾನೆ? ನನ್ನನ್ನೇನೂ ಹೊತ್ಕೊಂಡು ಹೋಗೊಲ್ವಲ್ಲ? ಆ ಧೈರ್ಯ ಯಾರಾದರೂ ಮಾಡಲಿ ನೋಡೋಣ..”

ಮುಳ್ಳಿನ ಉಪನ್ಯಾಸ ಪ್ರಾರಂಭವಾಗುತ್ತಿದ್ದ ಹಾಗೇ ಅಲ್ಲಿಗೆ ಶೇಕ್ಸ್‌ಪಿಯರನ ಮತ್ತೊಂದು ಸೃಷ್ಟಿ ಜ್ಯೂಲಿಯಟ್ ಬಂದಿದ್ದಳು. ಗುಲಾಬಿ ಇನ್ನೂ ಉಪನ್ಯಾಸ ಮೆಲುಕು ಹಾಕುವ ಮತ್ತಿನಲ್ಲಿದ್ದಳು. ಗುಲಾಬಿಯನ್ನು ಜೂಲಿಯಟ್ ನೋಡಿದಳು...
“ಓಹ್...ಎಷ್ಟು ಚೆನ್ನಾಗಿದೆ” ಎಂದವಳೇ ಗುಲಾಬಿಯನ್ನು ಕಿತ್ತು ಮುಡಿಗೇರಿಸಿಯೂ ಬಿಟ್ಟಳು.

ಗುಲಾಬಿಗೆ ಚಿವುಟಿದಂತಾಗಿ ಸ್ವಲ್ಪವೇ ಕಣ್ತೆರದಳು. ಜೂಲಿಯೆಟ್‌ಳನ್ನು ಒಮ್ಮೆ ದಿಟ್ಟಿಸಿ ನೋಡಿ..
“ಹ್ಹಂಹ್ ಹೆಣ್ಣಿಗೆ ಹೆಣ್ಣೇ ಶತ್ರು” ಎಂದು ನಿಟ್ಟುಸಿರಿಟ್ಟಳು.

ಆ ಕೂದಲ ರಾಶಿಯಲ್ಲಿ ಗುಲಾಬಿಯ ನಿಟ್ಟುಸಿರು ಯಾರಿಗೂ ಕೇಳಲೇ ಇಲ್ಲ.


ಅಕ್ಟೋಬರ್ ೧೯೮೬


No comments: