Tuesday, June 17, 2008

ಗಾಜುಗಳು



Men seldom make passes
At girls who wear glasses
Dorothy Parker
ಒಂದೂರು.

ಅಲ್ಲಿ ಒಂದು ಕಪ್ಪು ಗಾಜಿನ ಕನ್ನಡಕ, ಒಂದು ಸೋಡಾಬುಡ್ಡಿ ವಾಸವಾಗಿದ್ದುವು. ಒಂದು ದಿನ ಅವೆರಡರಲ್ಲೂ ಯಾರು ಶ್ರೇಷ್ಠ ಎಂಬದರ ಬಗ್ಗೆ ವಾದವಿವಾದ, ಚರ್ಚೆ, ಆರ್ಗ್ಯೂಮೆಂಟುಗಳು ನಡೆದುವು.

ಕಪ್ಪು ಕನ್ನಡಕ ಹೇಳಿತು - ‘ನಾನೇ ಉತ್ತಮ. ನನ್ನನ್ನು ಧರಿಸಿದವರು ಎತ್ತ ನೋಡುತ್ತಿದ್ದಾರೆಂದು ಯಾರಿಗೂ ತಿಳಿಯುವುದಿಲ್ಲ. ನಾನು ಧರಿಸಿದವರ ಅಂದವನ್ನು ಹೆಚ್ಚಿಸುತ್ತೇನೆ.’ ಸೋಡಾಬುಡ್ಡಿ ಬಿಟ್ಟೀತೇ? ‘ನಾನೇ ಉತ್ತಮೋತ್ತಮ. ಏಕೆಂದರೆ ನನ್ನನ್ನು ಧರಿಸಿದವರು ಸಾಮಾನ್ಯವಾಗಿ ಬುದ್ಧಿವಂತರಾಗಿರುತ್ತಾರೆ. ಖ್ಯಾತ ಸಂಶೋಧಕರಾಗಿರುತ್ತಾರೆ. ವಿಜ್ಞಾನಿಗಳಾಗಿರುತ್ತಾರೆ. ನಾನಿಲ್ಲದಿದ್ದರೆ ಅವರು ಬದುಕುವುದು ಅಸಾಧ್ಯ. ನನ್ನನ್ನು ಧರಿಸಿದವರಿಗೆ ದೂರದೃಷ್ಟಿ ಇರುತ್ತದೆ. ಮೇಲಾಗಿ ನನ್ನನ್ನು ಧರಿಸಿದವರೂ ಎತ್ತ ನೋಡುತ್ತಿದ್ದಾರೆ ಎಂಬುದು ತಿಳಿಯುವುದಿಲ್ಲ. ಅಷ್ಟು ದಪ್ಪ ಗಾಜು ನನ್ನದು.’

ಹೀಗೆಯೇ ಬಹಳ ಹೊತ್ತು ಇಬ್ಬರೂ ಜಗಳವಾಡುತ್ತಲೇ ಇದ್ದರು. ಕಡೆಗೆ ಅವರ ಬಗ್ಗೆ ಕಾಲವೇ ತೀರ್ಮಾನಿಸುವುದೆಂದು ಇಬ್ಬರೂ ಸುಮ್ಮನಾದರು.

ಕಡೆಗೊಂದು ದಿನ ಅವರ ಜಗಳ ತೀರ್ಮಾನವಾಗುವ ಸಮಯ ಸಮೀಪವಾಯಿತು. ಠಾಕೋಠೀಕಾಗಿ ಬಟ್ಟೆ ಧರಿಸಿದವನೊಬ್ಬ ಕಪ್ಪು ಕನ್ನಡಕ ತೊಟ್ಟು ನಿಂತಿದ್ದ. ಅವನ ಪಕ್ಕದಲ್ಲೇ ಸೋಡಾಬುಡ್ಡಿ ಧರಿಸಿ ಮತ್ತೊಬ್ಬ ನಿಂತಿದ್ದ. ಅವರೆದುರಿನಲ್ಲಿ ಹುಡುಗಿಯೊಬ್ಬಳು ಮಾಲೆ ಹಿಡಿದು ನಿಂತಿದ್ದಳು. ಸೋಡಾಬುಡ್ಡಿ ಅವಳನ್ನೇ ಆಸೆಯಿಂದ ನೋಡುತ್ತಿದ್ದ. ಅವ ಹಾಗೆ ನೋಡುತ್ತಿದ್ದಂತೆಯೇ ಅವಳು ಮಾಲೆಯನ್ನು ಕಪ್ಪು ಕನ್ನಡಕದವನಿಗೆ ಹಾಕಿದಳು. ಕಪ್ಪು ಕನ್ನಡಕದವ ತನ್ನ ಕತ್ತಲ್ಲಿ ಮಾಲೆ ಬಿದ್ದದ್ದು ನೋಡಿ ತಕ್ಷಣವೇ ಬೇರೆ ಹುಡುಗಿಯೆಡೆಗೆ ದಿಟ್ಟಿಸತೊಡಗಿದ. ಮಾಲೆ ಹಾಕಿದ ಹುಡುಗಿ ಅವ ತನ್ನನ್ನೇ ನೋಡುತ್ತಿದ್ದಾನೆಂದು ಭಾವಿಸಿದಳು.

ಸೋಡಾಬುಡ್ಡಿಗೆ ದುಃಖವಾಯಿತು. ಅದನ್ನು ಧರಿಸಿದ್ದವನಿಗೂ ದುಃಖವಾಯಿತು. ಅವನ ಕಣ್ಣೀರು ಆ ದಪ್ಪ ಗಾಜುಗಳ ನಡುವೆ ಯಾರಿಗೂ ಕಾಣಲಿಲ್ಲ. ಆದರೆ ಸೋಡಾಬುಡ್ಡಿ ಧರಿಸಿದ್ದವನಿಗೆ ತಿಳಿಯದ ಒಂದೇ ವಿಷಯ ನನಗೆ ಗೊತ್ತು.. ಅದು ಕಪ್ಪು ಕನ್ನಡಕದವ ತನ್ನ ಕಂಗಳಿಗೆ ಕಾಂಟಾಕ್ಟ್ ಲೆನ್ಸ್ ಧರಿಸಿದ್ದ ವಿಷಯ!! ಸಂಶೋಧಕ ದೃಷ್ಟಿಯ ಸೋಡಾಬುಡ್ಡಿಗೆ ವಿಜ್ಞಾನ ಇಷ್ಟು ಮುಂದುವರೆದಿದೆ ಎಂದು ಗೊತ್ತೇ ಇರಲಿಲ್ಲ!!!!

ಆಗಸ್ಟ್ ೧೯೮೭




No comments: