Tuesday, June 17, 2008

ಸತ್ಯಾ, ಸತ್ಯಾ




ನಿಮಗೆ ಸತ್ಯನನ್ನು ನೇಣಿಗೇರಿಸಿದ ಕಥೆ ಗೊತ್ತಿಲ್ಲವೇ? ಹೇಗೆ ತಿಳಿದೀತು ಪಾಪ! ಅದನ್ನ ನನ್ನ ಅಡಗೂಲಜ್ಜಿಯಾಗಲೀ ನಿಮ್ಮ ಅಡುಗೂಲಜ್ಜಿಯಾಗಲೀ ಹೇಳಿರಲಿಕ್ಕೆ ಸಾಧ್ಯವಿಲ್ಲ. ಇದು ಇತ್ತೀಚೆಗೆ ನಡೆದದ್ದು. ಗಾಂಧಿಯ ಸಾವಿನ ನಂತರ -- ಅಂದರೆ ನಲವತ್ತೆಂಟರ ನಂತರೆ. ಹೇಳಲೇ..?

ಒಂದೂರು.
ಅಲ್ಲಿ ಸತ್ಯ ಮತ್ತು ಸುಳ್ಳ ಎಂದಿಬ್ಬರು ವಾಸವಾಗಿದ್ದರು.

ಒಂದು ದಿನ ಸುಳ್ಳ ಆವೇಶದಿಂದ ಹೇಳಿದ -
“ಸತ್ಯಮೇವ ಜಯತೇ” ಅದೇನೋ ಸತ್ಯನ ತಲೆಯ ಮೇಲೆ ಹೊಡೆದಂತಿತ್ತು ಪಾಪ!

ಸತ್ಯ ಏನು ಮಾಡುತ್ತಾನೆ? ಹೌದೇನೋ, ಇರಬಹುದೇನೋ ಎಂದು ನಂಬಿದ. ಅವನಿಗೇನು ಗೊತ್ತು ತನಗಿದು ಕಾಲವಲ್ಲ ಇದು ಕಲಿಗಾಲ, ತನಗೆ ಬ್ಯಾಡ್ ಟೈಮೂಂತ... ಕೋಲೆ ಬಸವನ ಹಾಗೆ ತಲೆ ಆಡಿಸಿ... ನಾನೇ ಗೆಲ್ತೇನೆ ಅನ್ನೋ ಬಿಮ್ಮಿನಲ್ಲಿ ಗಾಂಧಿಯ ವಿಗ್ರಹದ ಪಕ್ಕ ಹೋಗಿ ನಿಂತುಬಿಟ್ಟ.

ಆದರೆ ಜನ ಸುಮ್ಮನಿರುತ್ತಾರೆಯೇ? ತರಲೆಗಳು... ಯಾರೋ ಹೋಗಿ ನ್ಯಾಯನ ಬಳಿ ದೂರು ಕೊಟ್ಟರು. ಸತ್ಯ ಸುಳ್ಳನ್ನ ನಂಬಿದ್ದಾನೆ, ತಾನೇ ಗೆಲ್ಲೋದು ಅನ್ನೋ ಅಹಂಕಾರ ಬೇರೆ. ಸತ್ಯನ ಕೊಬ್ಬಿನ ಸಂಹಾರ ನಡೆಯಬೇಕು.

ನ್ಯಾಯ ಒಮ್ಮೆ ತೇಗಿದ. ಅವನ ಕಿವಿಗಳಿಗೆ “ಕೊಬ್ಬು” ಅನ್ನುವ ಶಬ್ದ ಕೇಳಲಿಲ್ಲ. ಆ ಶಬ್ದ ಅಷ್ಟು ದಪ್ಪ ಚರ್ಮದೊಳಗೆ ತೂರುವುದಾದರೂ ಹೇಗೆ? ವಿಚಾರಣೆ ನಡಸಿದಂತೆ ಮಾಡಿ ತೀರ್ಪು ಕೊಟ್ಟೇ ಬಿಟ್ಟ.......

“ಸತ್ಯ ಸುಳ್ಳನ್ನ ನಂಬಿ ದೇಶಕ್ಕೇ ಘೋರ ಅಪರಾಧ ಎಸಗಿದ್ದಾನೆ. ತಾನೇ ಗೆಲ್ಲುತ್ತೇನೆಂಬ ಜಯಾಂಧಕಾರದಲ್ಲಿ ಮುಳುಗಿರುವ ಸತ್ಯನಿಗೆ ಸತ್ಯದರ್ಶನ ಮಾಡಿಸಬೇಕು. ಪ್ರಿಯವಾದದ್ದು ಸತ್ಯವಲ್ಲ. ಸುಳ್ಳ ಹೇಳಿದ್ದು ಪ್ರಿಯ ಅಸತ್ಯ. ಆದ್ದರಿಂದ ಬೇಜವಾಬ್ದಾರಿಯಾಗಿ ವರ್ತಿಸಿದ ಸತ್ಯನಿಗೆ ಮರಣದಂಡನೆ.”

ಪಾಪ! ಸತ್ಯ ಎಲ್ಲೆಲ್ಲೋ ಅಹವಾಲು ಹೇಳಿಕೊಂಡ. ರಾಷ್ಟ್ರಪತಿಯ ದಯಾಭಿಕ್ಷೆಯೂ ದೊರೆಯಲಿಲ್ಲ. ನ್ಯಾಯ ಖುದ್ದಾಗಿ ಅವನನ್ನು ನೇಣು ಹಾಕಿದ. ಮತ್ತೆ ಖಾತ್ರಿಪಡಿಸಿಕೊಳ್ಳಲು ಸತ್ತೆಯಾ? ಎಂದ ಕೇಳಿದ. ‘ಅ’ಕಾರಾಂತ ಪುಲ್ಲಿಂದವಿದ್ದ ಸತ್ಯ ಈಗ ‘ಆ’ಕಾರಾಂತ ನಪುಂಸಕಲಿಂಗವಾಗಿದೆ... ಅದಕ್ಕೇ ಈ ನಡುವೆ ಜನ ‘ಸತ್ಯ’ ಎನ್ನುವುದಕ್ಕೆ ಬದಲು ‘ಸತ್ಯಾ?’ ಎಂದು ಕೇಳುತ್ತಿದ್ದಾರೆ. ಇನ್ನೂ ಬದುಕಿದ್ದಾನೆ ಸತ್ಯ ಅರೆಜೀವವಾಗಿ!

ನ್ಯಾಯ ಮಾತ್ರ ಇಂದಿಗೂ ಸತ್ಯಾ ಸತ್ಯಾ ಎಂದು ಹೊಡೆದುಕೊಳ್ಳುತ್ತಿದ್ದಾನೆ.. ಹೀಗೆ ಈ ಕಥೆ ಇನ್ನೂ ಮುಗಿದಿಲ್ಲ.

ಅಕ್ಟೋಬರ್ ೧೯೮೬


No comments: