Tuesday, June 17, 2008

ವರದಿಯಾಗದ ಒಂದು ಪ್ರಸಂಗ


ಮೊನ್ನೆ ಆಂಧ್ರಪ್ರದೇಶದಲ್ಲಿ ರಾಮರಾಯರ ಸರಕಾರ ಉರುಳಿಬಿದ್ದಾಗ, ಅಥವಾ ಅದನ್ನು ಉರುಳಿಸಿದಾಗ ಕೋಪಗೊಂಡವರು ಬಹಳ ಮಂದಿ. ದುಃಖಪಟ್ಟವರು ಇನ್ನಷ್ಟು. ಆದರೆ ಸಂತೋಷಗೊಂಡವರು ಇಲ್ಲವೇ? ಇದ್ದಾರೆ!! ಯಾವ ರಾಜಕೀಯ ಪಕ್ಷಕ್ಕೂ ಸೇರದ, ರಾಜಕೀಯದೊಂದಿಗೆ ಸಂಬಂಧವೇ ಇಲ್ಲದ ಒಬ್ಬ ವ್ಯಕ್ತಿ ಬಹಳ ಖುಷಿಯಾಗಿದ್ದ.

ಬನ್ನಿ ನಿಮಗೆ ಕೊಮುರಯ್ಯನ ಪರಿಚಯ ಮಾಡಿಸುತ್ತೇನೆ. ಕೊಮುರಯ್ಯ ಒಂದು ಮ್ಯಾಟಡಾರ್ ವ್ಯಾನಿನ ಮಾಲೀಕ. ಪೊತಂಗಲ್‌ನಿಂದ ಬೋಧನ್‌ಗೆ ಈ ವ್ಯಾನನ್ನು ಓಡಿಸುವುದೇ ಅವನ ವೃತ್ತಿ. ಅವನಂತೆಯೇ ವ್ಯಾನುಗಳನ್ನು ಓಡಿಸುವವರ ಒಂದು ಗುಂಪಿದೆ. ಅದಕ್ಕೆ ಅವನೇ ನಾಯಕ.

ಆಗಸ್ಟ ೧೬, ೧೯೮೪ - ಮಧ್ಯಾಹ್ನ ಪ್ರದೇಶ ಸಮಾಚಾರದಲ್ಲಿ ರಾಮರಾಯರ ಸರಕಾರ ಉರುಳಿದ, ಭಾಸ್ಕರರಾಯರ ಸರಕಾರ ಪ್ರಮಾಣವಚನ ಸ್ವೀಕರಿಸಿದ ಸುದ್ದಿ ಆಕಾಶವಾಣಿ ಬಿತ್ತರಿಸಿತು.ತಕ್ಷಣ ಕೊಮುರಯ್ಯನ ವ್ಯಾನು ಪೊತಂಗಲ್‌ನಿಂದ ಬೋಧನ್‌ಗಿದ್ದ ರೂಟನ್ನು ಲಂಬೀಕರಿಸಿ ನಿಜಾಮಾಬಾದ್‌ವರೆಗೂ ಹೋಗಲು ಅನುವಾಯಿತು. ಅವನ ಲಡಾಸು ವ್ಯಾನಿಗೆ ಡೀಜಲ್ ಟ್ಯಾಂಕೇ ಇರಲಿಲ್ಲ!! ಇಂಜಿನ್ ಪಕ್ಕದಲ್ಲಿದ್ದ ಸೀಮೆ‌ಎಣ್ಣೆ ಡಬ್ಬದಿಂದ ಎರಡು ಟ್ಯೂಬ್‌ಗಳಲ್ಲಿ ಇಂಜಿನ್‌ಗೆ ಕನೆಕ್ಷನ್ ನೀಡಲಾಗಿತ್ತು. ಆ ಡಬ್ಬಕ್ಕೇ ಹತ್ತು ಲೀಟರ್ ಡೀಜಲ್ ಸುರಿಸಿಕೊಂಡ.

ಸಾಮಾನ್ಯವಾಗಿ ಇದ್ದ ರೇಟು ಈ ರಾಜಕೀಯ ತಿರುವಿನೊಂದಿಗೆ ಹೆಚ್ಚಾಯಿತು. ಪೊತಂಗಲ್‌ನಿಂದ ೫ ರೂಪಾಯಿ, ರುದ್ರೂರ್‌ನಿಂದ ೪.೫೦, ಬೋಧನ್‌ನಿಂದ ೩.೫೦ ಆಯಿತು. ಬೇಕಿದ್ರೆ ಹತ್ತಿ ಇಲ್ಲವಾದರೆ ಬಿಡಿ ಅಂದ. ನಿಜಾಂಸಾಗರ್‌ನ ಅನೇಕ ಕಾಲುವೆಗಳು ಕೊಮುರಯ್ಯನಿಗೆ ವರದಾನವಾಗಿದ್ದವು. ದಾರಿಯಲ್ಲಿದ್ದ ಕಾಲುವೆಗಳ ಬಳಿಯಲ್ಲೆಲ್ಲಾ ನಿಲ್ಲಿಸಿ ರೇಡಿಯೇಟರ್‌ಗೆ ನೀರು ಸುರಿದುಕೊಳ್ಳುತ್ತಾ ವ್ಯಾನ್ ಸ್ಪೀಡಾಗಿ ಓಡಾಡಿಬಿಟ್ಟಿತು.

ತೆಲುಗುದೇಶಂನ ದೊಡ್ಡಕುಳಗಳಿಗೆ ರಾಜದೂತ್‌ನ ಕಾರ್ಬುರೇಟರ್ ಹಾಕಿದ ಅವರದೇ ಸ್ವಂತ ಬುಲೆಟ್‌ಗಳಿದ್ದುವು. ಆದರೆ ಸಣ್ಣ ಕಾರ್ಯಕರ್ತರು ನಿಜಾಮಾಬಾದಿಗೆ ಹೋಗಲೇಬೇಕಲ್ಲ? ವಿರೋಧ ಪಕ್ಷಗಳ ಸಂಯುಕ್ತ ಸಭೆಗೆ ಹಾಜರಿ ಹಾಕಲೇಬೇಕು. ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಲೇಬೇಕು. ಮಾರನೆಯ ದಿನದ ಬಂದ್ ಜಯಪ್ರದವಾಗಿ ನಡೆಯುವಂತೆ ನೋಡಿಕೊಳ್ಳಬೇಕು.

ವ್ಯಾನಿನ ಮುಂದಿನ ಸೀಟಿನಲ್ಲಿ ಕೊಮುರಯ್ಯನ ಮೆಹರ್‌ಬಾನಿಯಿಂದ ಠೀವಿಯಾಗಿ ಬೈಠಾಯಿಸಿದ್ದ ಕರಣಂ ಶ್ರೀನಿವಾಸಂನನ್ನು ಕೇಳಿದ - “ನಾಳೆ ಬಂದ್ ಆದ್ರೆ ನಮ್ಮ ವ್ಯಾನೂ ಓಡಾಡೋದಿಕ್ಕೆ ಆಗಲ್ವಾ?”

“ಸಾಧ್ಯವೇ ಇಲ್ಲ. ನಾಳಿನ ಬಂದ್ ಮಾತ್ರ ಸಂಪೂರ್ಣವಾಗಿ ಇರುತ್ತೆ.”

“ಹಾಗಾದ್ರೆ ಬಂದ್ ಎಲ್ಲಾ ಕಡೆ ಆಗಬೇಕಾದ್ರೆ ಏನ್ ಮಾಡ್ತೀರಾ ಸರ್? ಎಲ್ಲಾಕಡೇನೂ ಹೋಗಿ ನೀವು ನಾಯಕರು ನಿಗಾ ಇಟ್ಟು ಮುಚ್ಚಿಸಿದರೆ ತಾನೇ ಬಂದ್ ಸರಿಯಾಗಿ ನಡೆಯೋದು? ಅನ್ನಗಾರಿ ಸರಕಾರವನ್ನು ಕಿತ್ತು ಹಾಕಿದ್ದಕ್ಕೆ ನನಗೂ ಕೋಪ ಇದೆ. ನೋಡಿ, ಬೇಕಿದ್ರೆ ನನ್ ವ್ಯಾನು ಓಡಿಸ್ತೀನಿ. ನಿಮ್ಮವರೆಲ್ಲಾ ಇದ್ರಲ್ ಕೂತ್ಕೊಂಡ್ರೆ - ನಿಜಾಮಾಬಾದ್, ಎಡಪಲ್ಲಿ, ಬೋಧನ್, ರುದ್ರೂರ್, ಪೆಂಟಖುರ್ದ್, ಕೋಟಗಿರಿ, ಕೊಲ್ಲೂರ್, ಸುಂಕಿನಿ, ಪೊತಂಗಲ್.. ಯಾಕೆ ಕಡೆಗೆ ಕಲ್ಲೂರಲ್ಲೂ ಬಂದ್ ಆಗೋಹಾಗೆ ನೋಡಿಕೋಬಹುದು. ಬೇಕಿದ್ರೆ ನನ್ನ ಕ್ಲೀನರ್‌ಗಳನ್ನೂ ಕಳಿಸಿಬಿಡ್ತೀನಿ.. ಡೀಜಲ್ ಖರ್ಚಿನ ಮೇಲೆ ೫೦ ಕೊಟ್ಟರೆ ಸಾಕು.”

“ಪರವಾಗಿಲ್ಲಾ ಐಡಿಯಾ ಚೆನ್ನಾಗಿದೆ. ಎಲ್ಲಾ ಕಡೇನೂ ವ್ಯಾನ್ ಓಡಿಸ್ತೀನಿ ಅಂತಾ ಇದೀಯ... ಈ ವಿಷಯ ಮೀಟಿಂಗ್‌ನಲ್ಲಿ ಹೇಳ್ತೀನಿ. ನೋಡೋಣ.”

ಆಗಸ್ಟ್ ೧೭, ೧೯೮೪ - ಬಂದ್ ಬಹಳ ಮಟ್ಟಿಗೆ ಶಾಂತಯುತವಾಗಿ ನಡೆಯಿತು. ಎಲ್ಲೂ ಹಿಂಸಾಚಾರದ ಘಟನೆಗಳು ವರದಿಯಾಗಲಿಲ್ಲ. ಆ ಪ್ರಾಂತದ ಜನ ಅಂದು ಊಟ ಬಿಟ್ಟರೆ ನಡೆಸಿದ ಚಟುವಟಿಕೆ ಎಂದರೆ - ಪ್ರದೇಶ ಸಮಾಚಾರ ಹಾಗೂ ವಾರ್ತೆಗಳನ್ನು ಕೇಳಿದ್ದು. ವ್ಯಾನುಗಳು, ಬಸ್ಸು, ರೈಲು, ಕಡೆಗೆ ಕೆಲ ಖಾಸಗೀ ವಾಹನಗಳೂ ರಸ್ತೆಯ ಮೇಲೆ ಬರುವ ಧೈರ್ಯ ಮಾಡಲಿಲ್ಲ. ಕೊಮುರಯ್ಯನ ವ್ಯಾನು ಮಾತ್ರ ಹಾಯಾಗಿ, ಸ್ವೇಚ್ಛೆಯಿಂದ ರುದ್ರೂರ್, ಬೋಧನ್, ಪೊತಂಗಲ್ ಪ್ರಾಂತ್ಯಗಳಲ್ಲಿ ಓಡಾಡಿತು.

ಸಂಜೆ ಪ್ರಾದೇಶಿಕ ಸಮಾಚಾರದ ನಂತರ ಕೆಲ ವಿಪ್ಲವಾತ್ಮಕ ವಿದ್ಯಾರ್ಥಿಗಳು ರಾಜಕೀಯ ಚರ್ಚಿಸುತ್ತಾ ನಿಂತಿದ್ದರು. ಅನಂತಪುರದಲ್ಲಿ ನಡೆದ ಗಲಭೆಗಳನ್ನು ಮೆಚ್ಚಿ ಅವರು ಮಾತಾಡುತ್ತಿದ್ದರು. ಕೊಮುರಯ್ಯ ಕೂಡಾ ಅಲ್ಲೇ ನಿಂತಿದ್ದ. ಈ ವಿದ್ಯಾರ್ಥಿಗಳೇ ಅಲ್ಲವೆ ತನ್ನ ವ್ಯಾನಿನಲ್ಲಿ ಓಡಾಡಿ ಬಂದ್ ಜಯಪ್ರದವಾಗುವಂತೆ ನೋಡಿಕೊಂಡದ್ದು?

ಕೊಮುರಯ್ಯ ಅವರ ವಿಚಾರಗಳಿಗೆ ತನ್ನ ಕೈಲಾದ ಕಾಣಿಕೆಯನ್ನು ನೀಡಿದ. “ಇವರನ್ನು ಹೀಗೇ ಬಿಟ್ರೆ ಆಗದು. ನಾಳೆ ಬೋಧನ್‌ನಿಂದ ಒಂದೂ ಆರ್.ಟಿ.ಸಿ. ಬಸ್ ಹೋಗದಂತೆ ನೋಡಿಕೊಂಡರೆ ಸ್ವಲ್ಪ ಚುರುಕು ಮುಟ್ಟುತ್ತೆ. ನೋಡಿ, ಬೋಧನ್ ಸ್ಟಾಂಡಿಗೆ ಬರುವ ಪ್ರತಿ ಬಸ್‌ನ ಟೈರಿನಿಂದ ಗಾಳಿ ತೆಗೆದು ಬಿಡೋಣ. ಮತ್ತೆ ಡಿಪೋದಿಂದ ಬೇರೆ ಚಕ್ರಗಳು ಬರೋತನಕ, ಇವು ಮುಂದಕ್ಕೆ ಹೋಗೋದಕ್ಕೆ ಸಾಧ್ಯವಿಲ್ಲ. ನಿಜಾಮಾಬಾದ್ ಡಿಪೋದವರಿಗಿರೋ ತೊಂದರೆಗಳ ಮಧ್ಯ ಇವರಿಗೆ ಟೈರುಗಳನ್ನ ಕಳಿಸೋಷ್ಟರಲ್ಲಿ ಸಂಜೆ ಆಗಿಬಿಡುತ್ತೆ. ಬೆಳಿಗ್ಗೆ ಒಂದು ಘಂಟೆಕಾಲ ನಾವು ಚುರುಕಾಗಿದ್ದರೆ ಆ ನಂತರ ಬಸ್ಸುಗಳು ಬಂದ್ ಆದ ಹಾಗೇನೇ..”

ಆಗಸ್ಟ್ ೧೮, ೧೯೮೪ - ಬೆಳಿಗ್ಗೆ ಹೈದರಾಬಾದಿಗೆ ಹೊರಡಬೇಕಿದ್ದ ಸಿದ್ದಿರಾಂರೆಡ್ಡಿಯವರು ಪೊತಂಗಲ್ ಬಸ್ ನಿಲ್ದಾಣಕ್ಕೆ ಬಂದಾಗ ಕೆಲ ಪ್ರಯಾಣಿಕರನ್ನು ಕೂಡಿಸಿಕೊಂಡು ಕೊಮುರಯ್ಯನ ವ್ಯಾನು ಗೂಳಿ ನುಗ್ಗುವಂತೆ ನುಗ್ಗಲು ತಯಾರಾಗಿ ನಿಂತಿತ್ತು.

“ಏನು ಕೊಮುರಯ್ಯ ಬೋಧನ್‌ನಿಂದ ಬಸ್ಸು ನಡೀತಾ ಇದೆಯಾ?”
“ಏನೋ, ಬೆಳಿಗ್ಗೆ ಬಂದ ಹಾಗಿತ್ತು ಸರ್. ಹೈದರಾಬಾದಿನ ಬಸ್ ನಡೀತಾ ಇದೆ ಅಂದ್ರು. ಬನ್ನಿ ಕೂತ್ಕೊಳ್ಳಿ. ಈವತ್ತು ಬೊಧನ್‌ಗೆ ೨.೫೦ ಚಾರ್ಜು.”
“ಎಲ್ಲಾ ಕಳ್ರೇ. ಅವಕಾಶ ಸಿಕ್ಕಿದರೆ ಬೆಲೆ ಜಾಸ್ತಿ ಮಾಡಿಬಿಡೋದು.” ಗೊಣಗಿಕೊಳ್ಳುತ್ತಾ ಸಿದ್ದಿರಾಂರೆಡ್ಡಿ ಕುಳಿತುಕೊಂಡರು.

ಬೊಧನ್ ಬಸ್ ನಿಲ್ದಾಣದಲ್ಲಿ ಮತ್ತೆ ಕೊಮುರಯ್ಯನದೇ ಆರ್ಭಟ.. “ಯಾರ್ರೀ ನಿಜಾಮಾಬಾದ್, ನಿಜಾಮಾಬಾದ್...”

ಮತ್ಯಾರೋ ಮಹಾನುಭಾವರು ಬಂದು ಕೇಳಿದರು: “ಅಲ್ಲಿಂದ ಹೈದರಾಬಾದಿಗೆ ಬಸ್ಸಿದೆಯೇನಪ್ಪಾ?”
“ಕಾಮಾರೆಡ್ಡಿ ರೂಟ್ ಮೇಲೆ ಇರಬಹುದು ಸರ್. ಬನ್ನಿ ನಿಜಾಮಾಬಾದ್‌ಗೆ ೩.೫೦ ಮಾತ್ರ.”

ಇಳಿದು ಹೋಗಿದ್ದ ಸಿದ್ದಿರಾಂರೆಡ್ಡಿಯವರೂ ಸಹ ಬಂದು ಕುಳಿತುಕೊಂಡರು. ನಿಜಾಮಾಬಾದ್ ತಲುಪಿದ ಮೇಲೆ ಮತ್ತೆ ಪ್ರಾರಂಭವಾಯುತು.. “ಯಾರ್ರೀ ಬೋಧನ್, ಬೋಧನ್, ಬೊಧನ್....”

ಮತ್ತೊಬ್ಬ ಮಹಾನುಭಾವ ಕೇಳಿದ - “ಮೆದಕ್ ರೂಟಿನ ಮೇಲೆ ಹೈದರಾಬಾದಿಗೆ ಬಸ್ಸುಗಳು ನಡೀತಾ ಇದೆಯಾ?”
“ಗೊತ್ತಿಲ ಸರ್. ಕಾಮಾರೆಡ್ಡಿ ರೂಟ್ ಮೇಲೆ ಧರ್ಮಾರಂನಲ್ಲಿ ಗಲಾಟೆ ನಡೀತಾ ಇದೇಂತ ಹೇಳಿದ್ರು. ಬೋಧನ್ ಕಡೆ ಬಸ್ಸುಗಳು ಓಡಾಡ್ತಾ ಇದ್ದಹಾಗಿತ್ತು. ಬನ್ನಿ ಬರೇ ೩.೫೦ ರೂಪಾಯಿ.”

ಬೋಧನ್‌ನಲ್ಲಿ ಗಾಳಿ ಬಿಚ್ಚಿಸಿಕೊಂಡ ನಾಲ್ಕು ಬಸ್ಸುಗಳು ಅನಾಥವಾಗಿ ನಿಂತಿದ್ದುವು. ಕೊಮುರಯ್ಯನ ಲಡಾಸು ವ್ಯಾನು ಆರಾಮವಾಗಿ ಆರೋಗ್ಯಕರವಾಗಿ ಓಡಾಡಿಕೊಂಡಿತ್ತು.

ಕೊನೆಯ ಮಾತು -
ಈ ಘಟನೆಗಳು ನಡೆದ ನಂತರವೂ ಕೊಮುರಯ್ಯ ಆರಾಮವಾಗಿ ತನ್ನ ವ್ಯಾನನ್ನು ಓಡಾಡಿಸಿಕೊಂಡಿದ್ದಾನೆ. ಗಲಾಟೆ ಮಾಡಿ ಬಸ್ಸಿನ ಚಕ್ರಕ್ಕೆ ಗಾಳಿ ಬಿಚ್ಚಿದವರೆಲ್ಲ ಜೈಲಿನ ಕಂಬಿ ಎಣಿಸಿದರು. ಈಗ್ಗೆ ಇದು ನಡೆದ ನಂತರ ಎರಡು ಬಂದ್ ನಡೆದಿವೆ - ಆಂಧ್ರಪ್ರದೇಶ್ ಬಂದ್, ಭಾರತ್ ಬಂದ್. ಬಂದ್ ನಡೆದಾಗ, ಮತ್ತು ನಂತರದ ಎರಡು ದಿನ ನಿಜಾಮಾಬಾದ್ ಡಿಪೋದಿಂದ ಬೋಧನ್ ಕಡೆಗೆ ಆರ್.ಟಿ.ಸಿ. ಬಸ್ಸುಗಳ ಸಂಚಾರ ನಿಂತು ಹೋಗುತ್ತದೆ. ಕೊಮುರಯ್ಯನ ಲಡಾಸು ಗಾಡಿ ಭಾಗ್ಯಲಕ್ಷ್ಮೀ ಲಾಟರಿಯಾಗಿ ಪರಿವರ್ತನೆಗೊಳ್ಳಬಹುದೆಂದು ಕೆಲದಿನಗಳ ಹಿಂದೆ ಅದನ್ನು ಕೊಂಡುಕೊಂಡಾಗ ಬಹುಶಃ ಅವನೇ ಊಹಿಸಿರಲಿಲ್ಲವೇನೋ!!!!!!!!!!!!!!


ಆಗಸ್ಟ್, ೧೯೮೪


No comments: