Sunday, June 22, 2008

ಮಾಸ್ತಿ ವೆಂಕಟೇಶ ಅಯ್ಯಂಗಾರ್





ಒಂದು ದಿನ ಸಾಯಂಕಾಲ ಬಸವನಗುಡಿ ಪ್ರಾಂತದಲ್ಲಿರುವ ನನ್ನ ಹಿರಿಯ ಮಿತ್ರರ ಅಂಗಡಿಯಲ್ಲಿ ನಾವು ಒಂದಷ್ಟು ಜನ ಅದೂ, ಇದೂ ಮಾತನಾಡುತ್ತಾ ಕುಳಿತಿದ್ದೆವು. ಮಾತು ಮುಂದುವರೆದಂತೆ, ವಿಷಯ ದೆವ್ವ ಪಿಶಾಚಗಳತ್ತ ಹರಿಯಿತು. ಅಲ್ಲಿದ್ದ ನಮಗೆಲ್ಲ ಕಥೆ ಕಾದಂಬರಿ ಹೀಗೆ ಸಾಹಿತ್ಯದಲ್ಲಿ ಆಸಕ್ತಿ ಇದ್ದುದರಿಂದ, ಸಹಜವಾಗಿಯೇ ದೆವ್ವ ಪಿಶಾಚಗಳ ಕಥೆಗಳತ್ತಲೂ ಮಾತು ಹೊರಳಿತು. ನಾನು ಸಾಕಿ, ಎಚ್.ಜಿ.ವೆಲ್ಸ್, ಇತ್ಯಾದಿ ಲೇಖಕರ ಹೆಸರನ್ನು ಹೇಳಿದೆ. ಕಡೆಗೆ ಕನ್ನಡ ಸಾಹಿತ್ಯದತ್ತ ಮಾತು ಹೊರಳಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರ ಕಥೆಗಳಾದ ’ಮಲೆನಾಡಿನ ಒಂದು ಪಿಶಾಚ’ ’ವೆಂಕಟರಾಯನ ಪಿಶಾಚ’ ಈ ಎಲ್ಲವನ್ನೂ ಚರ್ಚಿಸಿದವೆ.

ನಮ್ಮ ಹಿರಿಯ ಮಿತ್ರರು ಚೆನ್ನಾಗಿ ಓದಿಕೊಂಡವರು. ವಿಚಾರವಾದಿಗಳು. ದೇವರು, ದೆವ್ವ, ಪಿಶಾಚಗಳೆಂದರೆ ಅಷ್ಟೇನೂ ನಂಬುವವರಲ್ಲ. ಹೀಗಿದ್ದರೂ ಈ ಮಿತ್ರರು - ತಾವು ಮುಂದೆ ಹೇಳಲಿರುವ ಸಾಲನ್ನು ಉದಾಹರಣೆಯಾಗಿ ಕೊಟ್ಟರು. "ನಮ್ಮಲ್ಲೆ ಅನೇಕರಿಗೆ ಪಿಶಾಚ ಇದೆ ಎಂಬ ನಂಬಿಕೆ ಇಲ್ಲದಿದ್ದರೂ ಪಿಶಾಚ ಇಲ್ಲ ಎನ್ನುವುದರ ನಂಬಿಕೆ ಇಲ್ಲ". ಈ ಪೀಠಿಕೆಯನ್ನು ಹಾಕಿ ಮಾತುಕತೆ ಮುಂದುವರೆಸಿದ ಈ ಹಿರಿಯ ಮಿತ್ರರು, ತಮಗೆ ಈಚೆಗೆ ಆದ ಅನುಭವವನ್ನು ವಿವರಿಸಿದರು. ಮಾಸ್ತಿಯವರ ಕಥೆಗಳಲ್ಲಿ ಬರುವ ಪಿಶಾಚದ ಘಟನೆಗಳು, ಅದರೊಂದಿಗೇ ಬರುವ ಅವರ ಗೆಳೆಯರಾದ ’ಶ್ರೀರಾಮ್’ ಎಂಬವರ ಹೆಸರೂ, ಹಾಗೂ ನನಗೂ ಅದೇ ಹೆಸರಿರುವ ಸತ್ಯ.. ಹೀಗೆಲ್ಲಾ ಕಾಕತಾಳೀಯವು ತುಂಬಾ ಇರುವುದರಿಂದ ಈ ಕಥೆಯನ್ನು ಹೇಳಲೇಬೇಕು ಎನ್ನಿಸುತ್ತಿದೆ. ಹಾಗೆ ನೋಡಿದರೆ ನನಗಿಂತ ಒಳ್ಳೆಯ ಕಥೆಗಾರರಾದ ಹಿರಿಯ ಮಿತ್ರರೇ ಇದನ್ನು ಬರೆಯಬಹುದಿತ್ತು. ಅವರು ಇದನ್ನು ಬರೆಯಲು ಆಸಕ್ತಿ ತೋರಿಸಲಿಲ್ಲವಾದ್ದರಿಂದ - ನಾನೇ ಇದನ್ನು ಬರೆಯಲು, ಮಿತ್ರರ ಅನುಭವವನ್ನು ನಿಮ್ಮೊಂದಿಗೂ ಹಂಚಿಕೊಳ್ಳಲು ಮುಂದಾಗುತ್ತಿದ್ದೇನೆ.



ಕೆಲವು ವರ್ಷಗಳಿಂದ ಈ ಹಿರಿಯ ಮಿತ್ರರು ಬಸವನಗುಡಿ ಪ್ರಾಂತದಲ್ಲಿ ತಮ್ಮ ಪುಸ್ತಕದಂಗಡಿಯ ಕಾರುಬಾರು ನಡೆಯಿಸಿಕೊಂಡು ಬರುತ್ತಾ ಇದ್ದಾರೆ. ಸಾಹಿತ್ಯ ಪ್ರಿಯರೂ, ಸಾಹಿತಿಗಳೂ ಆಗಿರುವುದರಿಂದ ಈ ಮಿತ್ರರು ಹೆಚ್ಚಿನ ಸಮಯವನ್ನು ಪುಸ್ತಕಗಳ ನಡುವೆಯೇ ಕಳೆಯಲು ಬಯಸುತ್ತಾರೆ. ಪ್ರತಿದಿನ ಬೆಳಿಗ್ಗೆ ಲಾಲ್‌ಬಾಗಿಗೆ ವಾಕಿಂಗ್ ಹೋಗಿ ಬರುವುದು. ಮನೆಗೆ ಬಂದು ತಿಂಡಿ ತಿನ್ನುವುದು. ನಂತರ ಮನೆಯಿಂದ ಅಂಗಡಿಗೆ ಹೊರಟರೆಂದರೆ ಅಲ್ಲಿಯೇ ಕುಳಿತು ಓದುವುದು, ಬರೆಯುವುದು, ಬೇಸರವಾದಾಗ ಮಲಗುವುದು ಮಾಡುತ್ತಾರೆ. ಅದಕ್ಕೆಂದೇ ಅವರು ಅಂಗಡಿಯ ಹಿಂಭಾಗದಲ್ಲಿ ಒಂದು ಪುಟ್ಟ ಆಂಟೆರೂಮನ್ನು ಮಾಡಿಕೊಂಡಿದ್ದಾರೆ. ಅದೇ ಕೋಣೆಯಲ್ಲಿ ಒಂದು ವಿಡಿಯೋ, ಹಾಗೂ ಪುಟ್ಟ ಟಿ.ವಿ. ಇದೆ. ವಾರ್ತೆಗಳಿಗೆ, ಮತ್ತು ಒಂದಷ್ಟು ಒಳ್ಳೆಯ ಸಿನೆಮಾ ಕ್ಯಾಸೆಟ್ಟುಗಳನ್ನು ನೋಡುವುದಕ್ಕೆ ಅದನ್ನು ಬಳಸುತ್ತಾರೆ. ಹೀಗೆ ಅಂಗಡಿಯನ್ನೇ ಜೀವನದ ಒಂದು ಅಂಗವನ್ನಾಗಿ ಈ ಮಿತ್ರರು ಮಾಡಿಕೊಂಡಿದ್ದಾರೆ. ಪ್ರತಿದಿನ ಬೆಳಿಗ್ಗೆ ೯ ಘಂಟೆಗೆ ಅವರು ಅಂಗಡಿ ತಲುಪಿದರೆ, ರಾತ್ರೆ ದೂರದರ್ಶನದ ಇಂಗ್ಲೀಷು ವಾರ್ತೆಗಳ ನಂತರವೇ ಅವರು ಮನೆಗೆ ಹೋಗುವುದು. ಅಂಗಡಿಯ ವ್ಯಾಪಾರ ಸುಗಮವಾಗಿ ನಡೆಯಲು ನಮ್ಮ ಮಿತ್ರರು ಇಬ್ಬರು ಹುಡುಗರನ್ನು ನಿಯಮಿಸಿಕೊಂಡಿದ್ದಾರೆ. ಅವರಿಬ್ಬರೂ ಅಂಗಡಿ ನೋಡಿಕೊಳ್ಳುವುದರಿಂದ, ನಮ್ಮ ಮಿತ್ರರು ಹೊರ ಅಂಗಡಿಯಲ್ಲಿರುವುದಕ್ಕಿಂತ ಒಳಕೋಣೆಯಲ್ಲಿರುವುದೇ ಹೆಚ್ಚು.

ಅಂಗಡಿಯ ಹೊರಕೋಣೆಯಲ್ಲಿಲ್ಲದಾಗ ನಮ್ಮ ಮಿತ್ರರನ್ನು ನೋಡುವುದು ಸರಳ ವಿಷಯವೇನೂ ಅಲ್ಲ. ಬಂದವರು ಮೊದಲಿಗೆ ಅವರ ಅಂಗಡಿಯ ಹುಡುಗನಿಗೆ ತಮ್ಮ ಪರಿಚಯ ಮತ್ತು ಬಂದ ಉದ್ದೇಶ ತಿಳಿಸಬೇಕು. ಅದನ್ನು ಹುಡುಗನು ಹೋಗಿ ನಮ್ಮ ಮಿತ್ರರಿಗೆ ಹೇಳುವನು. ಆಗ ಮಿತ್ರರು ಮುಖ್ಯಕೆಲಸ ಯಾವುದೂ ಇಲ್ಲದಿದ್ದಲ್ಲಿ, ಬರವಣಿಗೆಯಲ್ಲಿ ನಿರತರಾಗಿಲ್ಲದಿದ್ದಲ್ಲಿ ಬಂದವರಿಗೆ ಸಂದರ್ಶನ ನೀಡುವರು. ಹೀಗೆ ಅವರು ಒಳಗೆ ಅಡಗಿ ಕುಳಿತುಕೊಳ್ಳುವುದಕ್ಕೂ ಕಾರಣವಿತ್ತು. ಕನ್ನಡದಲ್ಲಿ ಈಚೀಚೆಗೆ ಬರಹಗಾರರು ಬಹಳವಾಗಿ, ಓದುಗರು ಕಡಿಮೆಯಾಗಿರುವುದನ್ನು ಪುಸ್ತಕ ವ್ಯಾಪಾರಿಗಳಾದ ಮಿತ್ರರು ಮನಗಂಡಿದ್ದರು. ಹೀಗಾಗಿ, ತಾವು ಬರೆದ ಪುಸ್ತಕಗಳನ್ನು ತಾವೇ ಅಚ್ಚು ಹಾಕಿಸಿ, ಮಾರಾಟ ಮಾಡಲು, ಲೇಖಕರು ಇವರ ಅಂಗಡಿಗೆ ಬರುವುದು ಸಾಮಾನ್ಯ ವಿಷಯವಾಗಿತ್ತು. ನಮ್ಮ ಮಿತ್ರರೂ ಲೇಖಕರೇ ಆದುದರಿಂದ ಅವರ ಪಾಡನ್ನು ನೋಡಿ ಕರಗಿಬಿಡುತ್ತಿದ್ದರು. ಹೀಗಾಗಿ ಲೇಖಕರಿಗೆ ’ಬೇಡ’ ಎಂಬ ಉತ್ತರ ಹೇಳುವುದು ಸಾಧ್ಯವಾಗದೇ ಮಾರಾಟವಾಗದ ಪುಸ್ತಕಗಳ ದಾಸ್ತಾನು ಹೆಚ್ಚಾಗಿ ಹೋಗುತ್ತಿತ್ತು. ಇಂಥ ಸಂದರ್ಭಗಳು ಒದಗಿದಾಗ ನಮ್ಮ ಮಿತ್ರರು ಒಳಗೇ ಇದ್ದು ಬಿಡುವುದೂ ಹಾಗೂ ಅಂಗಡಿಯ ಹುಡುಗರೇ "ಸಾಹೇಬರು ಒಳಗಿಲ್ಲ" ಎಂದೋ, "ಯಜಮಾನರು ಏನೋ ಬರೆಯುತ್ತಿದ್ದಾರೆ" ಎಂದೋ ಹೇಳಿ ಕಳುಹಿಸಿಬಿಡುತ್ತಿದ್ದರು. ಅವರ ಈ ಅಭ್ಯಾಸ ನಮಗೆಲ್ಲರಿಗೂ ತಿಳಿದದ್ದೇ. "ವ್ಯವಹಾರವೇ ಬೇರೆ, ಸಾಹಿತ್ಯದ ಬಗೆಗಿನ ಪ್ರೀತಿಯೇ ಬೇರೆ - ಅಲ್ಲವೇ?" ಎಂದು ಅವರೊಮ್ಮೆ ನಮ್ಮನ್ನು ಕೇಳಿದ್ದಾಗ ನಾವುಗಳೆಲ್ಲಾ ಅಹುದೆಂದು ಒಪ್ಪಿದೆವು. ದಿಟವಾದ ಮಾತನ್ನು ಯಾರೇ ಹೇಳಿದರೂ ಒಪ್ಪಬೇಕಾದುದ್ದೇ - ಅಲ್ಲವೇ?



ಹಿಂದೆ ಕೊಟ್ಟ ವಿವರಗಳಿಗೂ, ನಮ್ಮ ಮಿತ್ರರು ಹೇಳಿದ ಕಥೆಗೂ ಸಂಬಂಧ ಇದೆ ಎನ್ನಿಸಿದ್ದರಿಂದಲೇ ನಾನು ನಿಮಗೆ ಈ ಹಿನ್ನೆಲೆಯನ್ನು ಹೇಳಿದೆ. ಈಗ ನಮ್ಮ ಮಿತ್ರರು ಅಂದು ಸಂಜೆ ವಿವರಿಸಿದ ಘಟನೆಯನ್ನು ನಾನು ನಿಮಗೆ ಹೇಳುವೆನು.

ಯಾವಾಗಲಾದರೂ ಬೇಸರವಾದಾಗ - ಅದೂ ಸಂಜೆಯ ವೇಳೆಯಲ್ಲಿ ನಮ್ಮ ಮಿತ್ರರು ಒಳಕೋಣೆಯಲ್ಲಿ ಕುಳಿತು ಸುರೆ ಕುಡಿಯುತ್ತಿದ್ದುದುಂಟು. ಈಗಿನ ಕಾಲದಲ್ಲಿ ಇದನ್ನು ಮಹಾಪರಾಧ ಎಂದು ಪರಿಗಣಿಸಲಾಗದಿದ್ದರೂ, ಮಧ್ಯ ವಯಸ್ಸಿನಲ್ಲಿರುವ ನನ್ನ ಹಿರಿಯ ಮಿತ್ರರಂಥವರಿಗೆ ಈ ಬಗ್ಗೆ ಸ್ವಲ್ಪ ಅಳುಕು ಇರುವುದು ಸಹಜವೇ ಆಗಿರುತ್ತದೆ. ಹಾಗೆ ನೋಡಿದರೆ ನನ್ನ ಈ ಮಿತ್ರರು ಹೆಚ್ಚು ಕುಡಿಯುವವರೇನೂ ಅಲ್ಲ.

ಹೀಗೆಯೇ ಒಂದು ಸಂಜೆ ತುಂಬಾ ಬೇಜಾರಾಗಿ, ಏನೂ ತೋರದೆ ನನ್ನ ಮಿತ್ರರು ಕುಳಿತಿದ್ದರಂತೆ. ಅಂದು ನಾವುಗಳ್ಯಾರೂ ಅವರನ್ನು ಭೇಟಿ ಮಾಡಲು ಹೋಗಿರಲಿಲ್ಲ. ಸುಮಾರು ಏಳು ಘಂಟೆಯ ವೇಳೆಗೆ ಏನೂ ತೋಚದವರಾಗಿ, ಮಿತ್ರರು ಸುರಾಪಾನ ಪ್ರಾರಂಭಿಸಿದರು. ಅಂದೇನು ಅಮಾವಾಸ್ಯೆಯೋ, ಹುಣ್ಣಿಮೆಯೋ ಹೇಳಲು ಬರುತ್ತಿದ್ದಿಲ್ಲ. ಏಕೆಂದರೆ ಹೊರಗೆಲ್ಲ ಮೋಡ ಮುಸಿಕಿದ್ದು ಇಡೀ ದಿನವೇ ಛಳಿಯಿಂದ ಕೂಡಿ, ಕತ್ತಲುಮಯ ಆಗಿತ್ತೆಂದು ಮಿತ್ರರು ಹೇಳಿದರು. ಅವರು ಸುರಾಪಾನ ಪ್ರಾರಂಭಿಸುವ ಮೊದಲು ಹೊರಬಂದು ಹುಡುಗರಿಗೆ - "ಹೊಸಬರು ಯಾರು ಬಂದರೂ ಒಳಗೆ ಬಿಡಬೇಡಿ" ಎಂದಷ್ಟೇ ಹೇಳಿ ಒಳಕೋಣೆಯ ಬಾಗಿಲು ಹಾಕಿ ಕುಳಿತರಂತೆ.

ಎಂಟು ಘಂಟೆಯ ವೇಳೆಗೆ ಇಬ್ಬರಲ್ಲಿ ಸಣ್ಣ ಹುಡುಗ ಇವರಿಗೆ ಹೇಳಿ ಮನೆಗೆ ಹೊರಟುಬಿಟ್ಟ. ಒಂಭತ್ತು ಘಂಟೆಯ ವೇಳೆಗೆ ದೊಡ್ಡವನು ಒಳಬಂದನಂತೆ. ಸಮಾನ್ಯವಾಗಿ ಆ ವೇಳೆಗೆ ಅವನು ಅಂಗಡಿಯ ಬಾಗಿಲು ಎಳೆದು ಮನೆಗೆ ಹೋಗುವುದು ರೂಢಿ. ಅವನು ಕೋಣೆಯೊಳಕ್ಕೆ ಬಂದ ಕೂಡಲೇ ನಮ್ಮ ಮಿತ್ರರು "ಸರಿ ನಾಳೆ ಸಮಯಕ್ಕೆ ಸರಿಯಾಗಿ ಬಾ. ಬಂದ ಮೇಲೆ ರಾಜಾಜಿನಗರಕೆ ಹೋಗಿ ಮಾವಿನಕೆರೆಯವರಿಂದ ಒಂದಿಷ್ಟು ಪುಸ್ತಕಗಳನ್ನು ತರಬೇಕು" ಎಂದು ಹೇಳಿದರಂತೆ.

ಅವರು ಹೇಳಿದ್ದಕ್ಕೆ ತೆಲೆ ಅಲ್ಲಾಡಿಸಿದ ಹುಡುಗ - ಅಲ್ಲಿಂದ ಹೊರಡದೆಯೇ - "ಸರ್ ನಿಮ್ಮನ್ನು ಕಾಣಲು ಹಿರಿಯರೊಬ್ಬರು ಬಂದಿದ್ದಾರೆ" ಎಂದು ಹೇಳಿದನಂತೆ. ಅಂದು ಆ ಸಮಯಕ್ಕಾಗಲೇ ಮಯಕವಾಗುವ ಮಟ್ಟಿಗೆ ಕುಡಿದಿದ್ದ ಮಿತ್ರರಿಗೆ ಯಾರುನ್ನೂ ಕಾಣುವ ಮನಸ್ಸೂ ಇರಲಿಲ್ಲ. "ಯಾರು? ಯಾರಾದರೂ ಹೊಸಬರೇನು?" ಎಂದು ಕೇಳಿದ್ದಕ್ಕೆ ಹುಡುಗ "ಹೌದು ಸರ್, ಈ ಹಿಂದೆ ಇವರು ಇಲ್ಲಿಗೆ ಬಂದಿಲ್ಲ, ವಯಸ್ಸಾದವರು, ಹಿರಿಯರು, ನಾಮ ಹಾಕಿಕೊಂಡಿದ್ದಾರೆ" ಅಂದನಂತೆ.

"ಇಷ್ಟು ಹೊತ್ತಿನಲ್ಲಿ ಯಾರು ಈ ಹಿರಿಯರು. ಹೆಸರು ಕೇಳಿದೆಯಾ? ಯಾರೂಂತ ಕೇಳಿ ಬಾ!" ಅಂತ ನಮ್ಮ ಮಿತ್ರರು ಹೇಳಿದರು. ಹುಡುಗ ಹೊರಕ್ಕೆ ಹೋಗಿ ಮತ್ತೆ ಒಳಬಂದು "ಸರ್, ಇವರು ಈ ವರೆಗೆ ನಮ್ಮ ಕಾರ್ಯಾಲಯಕ್ಕೆ ಬಂದಿರಲಿಲ್ಲ. ಸರ್ ಅವರು ಬೇರೆ ಯಾರೂ ಅಲ್ಲ - ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು... ಅವರೇ ಬಂದಿದ್ದರೆ." ಅಂದನಂತೆ.

ನಮ್ಮ ಮಿತ್ರರಲ್ಲಿ ತಲೆಯಲ್ಲಿ ಏನೆಲ್ಲಾ ನಡೆದುಹೋಗಿರಬಹುದು ಎಂದು ವಿವರಿಸುವುದು ಕಷ್ಟ. ಎಂದೋ ತೀರಿಕೊಂಡ ಹಿರಿಯ ಆತ್ಮ ಹೀಗೆ ತಮ್ಮನ್ನು ಕಾಣಲು ಬರುವುದೆಂದರೆ ಯಾರಿಗಾದರೂ ಭಯವಾದೀತು. ಇಲ್ಲಿ ಹುಡುಗನೇ ಏನಾದರೂ ತಪ್ಪು ಮಾಡಿರಬಹುದು - ಅವನಿಗಾದರೂ ಬದುಕಿರುವವರು ಯಾರು, ತೀರಿಕೊಂಡವರು ಯರು ಎಂದು ತಿಳಿಯಬೇಡವೇ? ಸಾಲದ್ದಕ್ಕೆ ಪುಸ್ತಕದಂಗಡಿಯಲ್ಲಿ ಬೇರೆ ಕೆಲಸ ಮಾಡುತ್ತಿರುವವನು ಎಂದೆಲ್ಲಾ ಅನ್ನಿಸಿದರೂ ಖಚಿತ ಮಾಡಿಕೊಳ್ಳಲು -

"ಏ ಸರಿಯಾಗಿ ನೋಡಿಕೊಂಡು ಬಾ..... ಹೋಗು, ಹೆಸರು ಸರಿಯಾಗಿ ಕೇಳಿಕೊಂಡು ಬಾ" ಎಂದು ಮತ್ತೆ ಅವನನ್ನು ಹೊರಗೆ ಕಳುಹಿದರಂತೆ.

ಆ ಹುಡುಗನು ಪುನಃ ಹೊರಹೋಗಿ ಬಂದವನು "ಅಹುದು ಸರ್.. ಅವರು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರೇ.. ವಯಸ್ಸಾಗಿದೆ ಸರ್.. ಹಣೆಯ ಮೇಲೆ ಕೆಂಪು ಬಿಳಿ ಮೂರುನಾಮ..." ಎಂದು ವರದಿ ಮಾಡಿದನಂತೆ.

ನನ್ನ ಮಿತ್ರರ ತೆಲೆಯಲ್ಲಿ ಕೂಡಲೇ ಮಲೆನಾಡಿನ ಪಿಶಾಚವೋ, ವೆಂಕಟರಾಯನ ಪಿಶಾಚವೋ ತಾಂಡವವಾಡತೊಡಗಿತ್ತಂತೆ. ಹೀಗೆ ಶುದ್ಧ ತುಂಬು ಜೀವನ ನಡೆಸಿ ಅಸುನೀಗಿದ ಈ ಹಿರಿಯರ ಆತ್ಮ ತನ್ನನ್ನು ಏಕೆ ಕಾಡಬೇಕು? ಹೀಗೆಲ್ಲಾ ಪ್ರಶ್ನೆಗಳು ಉದ್ಭವವಾಗುತ್ತಿದ್ದಂತೆ, ಹುಡುಗ ಕೋಣೆಯಿಂದ ಹೊರಗೆ ಹೋದನಂತೆ. ನಮ್ಮ ಮಿತ್ರರು.. ಈಗಾಗಲೇ ಸುರಾಪಾನ ಮಾಡುತ್ತಿರುವುದನ್ನು ಮಾಸ್ತಿಯವರು ಎಲ್ಲಿ ನೋಡಿಬಿಡುತ್ತಾರೋ ಎಂದು ಕಂಗಾಲಾಗಿ ಬೇಗ ಬೇಗ ಬಾಟಲಿಯನ್ನೂ ಲೋಟವನ್ನೂ ಅಡಗಿಸಿಟ್ಟು ಕೋಣೆಯ ಬಾಗಿಲು ಹಾಕಿ ಹೊರಬಂದರಂತೆ. ಹೊರಬಂದು ನೋಡಿದರೆ ಯಾರೂ ಇಲ್ಲ.

ಹುಡುಗನು "ಇದೀಗ ಕಳುಹಿಸಿಬಿಟ್ಟೆ ಸಾರ್. ನಿಮ್ಮ ಮೂಡು ಸರಿಯಿರಲಿಲ್ಲವಲ್ಲ. ’ನಾಳೆ ನಾಡಿದ್ದರಲ್ಲಿ ಬಂದು ಕಾಣುತ್ತೇನೆ’. ಎಂದು ಹೇಳಿದರು" ಎಂದನಂತೆ.

ಈ ಘಟನೆಯನ್ನು ನಮಗೆಲ್ಲ ವಿವರಿಸಿದ ನಮ್ಮ ಮಿತ್ರರು "ನೋಡಿ ಅಂದಿನಿಂದ ಒಬ್ಬನೇ ಸಂಜೆಯ ವೇಳೆ ಕುಡಿಯುವುದನ್ನು ಬಿಟ್ಟು ಬಿಟ್ಟಿದ್ದೇನೆ. ಅದೇಕೋ ಮಾಸ್ತಿಯವರೆಂದರೆ ಒಂದು ರೀತಿಯ ಅಳುಕು." ಎಂದರು.

ಅಂದು ಸಂಜೆ ನಿಜಕ್ಕೂ ಈ ಘಟನೆ ಹೇಹಾಗಿರಬಹುದು ಎಂದು ವಾಸ್ತವದ ನೆಲೆಯಲ್ಲಿ ವಿವರಿಸಲು ನಾನು ಪ್ರಯತ್ನ ಮಾಡಿದೆ. "ಯಾರಾದರೂ ಹಿರಿಯ ಅಯ್ಯಂಗಾರ್ಯರು ಅಂದು ನಿಮ್ಮನ್ನು ಕಾಣಲು ಬಂದಿದ್ದಿರಬಹುದು" "ಹುಡುಗ ಮಾಸ್ತಿಯವರ ಫೋಟೋ ನೋಡಿದವನು ತಪ್ಪಗಿ ಕಲ್ಪಿಸಿಕೊಂಡಿದ್ದಿರಬಹುದು" ಎಂದೆಲ್ಲಾ ಹೇಳಿದ್ದಕ್ಕೆ ನನ್ನ ಮಿತ್ರರು ಅಲ್ಲವೆಂಬಂತೆ ತಲೆಯಾಡಿಸಿ ಹೀಗೆಂದರು -

"ನೋಡಿ ವಾಸ್ತವದಲ್ಲಿ ಏನಾಯಿತು ಎಂಬುದು ಮುಖ್ಯ ಅಲ್ಲವೇ ಅಲ್ಲ. ಅಂದು ಸಂಜೆ ನಾನು ಒಬ್ಬನೇ ಕುಳಿತು ಕುಡಿಯುತ್ತಿದ್ದೆ. ನಮ್ಮ ಹುಡುಗ ಬೇರೇನೂ ಹೆಸರು ಹೇಳದೇ ಮಾಸ್ತಿಯವರ ಹೆಸರೇ ಹೇಳುವುದಕ್ಕೆ ದೈವ ಪ್ರೇರಣೆಯಾಗಿರಬಹುದು. ಮುಖ್ಯ ಏನೆಂದರೆ - ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಹೆಸರಿಗೇ ಅಂಟಿರುವ ಈ ಅಗಾಧ ಶಕ್ತಿ. ಇನ್ಯಾರದೇ ಹೆಸರು ಹೇಳಿದ್ದರೂ ಬಹುಶಃ ನಾನು ಒಬ್ಬನೇ ಕುಡಿಯುವುದನ್ನು ಬಿಡುತ್ತಿರಲಿಲ್ಲ ಅಲ್ಲವೇ? ಇದು ಮುಖ್ಯವಾದ ಸಂಗತಿ."

ಅಹುದೆಂದು ನಾವೆಲ್ಲಾ ಒಪ್ಪಿದೆವು. ದಿಟವಾದ ಮಾತನ್ನು ಯಾರೇ ಹೇಳಿದರೂ ಒಪ್ಪಬೇಕಾದುದ್ದೇ ಅಲ್ಲವೇ?

೧೯೯೨






2 comments:

ಕಾವ್ಯಕಮ್ಮಟ - 2016 said...

ಚೆಂದ ಇದೆ.ಕುಡಿತ ಬಿಟ್ಟದ್ದು ಮಾಸ್ತಿಯವರ ನೆನಪಿನಿಂದಲೇ? ಮಾಸ್ತಿ ಕುರಿತು ಗೌರವದಿಂದಲೇ ಅಥವಾ ತಮ್ಮ ಕುಡಿತವನ್ನು ಬಿಡಿಸಲು ಮತ್ತೆ ಕಾಣಿಸಿಕೊಂಡಾರು ಎಂಬ ಭಯದಿಂದಲೇ ಅಂತೂ ಮಾಸ್ತಿಯವರು ಬದುಕು ಮುಗಿಸಿದ್ದರೂ ಜಗತ್ತನ್ನು ತಿದ್ದುವ ಕಾಯಕ ಮುಗಿಸಿಲ್ಲ ನಿರಂತರ ನಡೆಸೇ ಇರುತ್ತಾರೆ ಎನಿಸುತ್ತದೆ.

ಕಾವ್ಯಕಮ್ಮಟ - 2016 said...

ಚೆಂದ ಇದೆ.ಕುಡಿತ ಬಿಟ್ಟದ್ದು ಮಾಸ್ತಿಯವರ ನೆನಪಿನಿಂದಲೇ? ಮಾಸ್ತಿ ಕುರಿತು ಗೌರವದಿಂದಲೇ ಅಥವಾ ತಮ್ಮ ಕುಡಿತವನ್ನು ಬಿಡಿಸಲು ಮತ್ತೆ ಕಾಣಿಸಿಕೊಂಡಾರು ಎಂಬ ಭಯದಿಂದಲೇ ಅಂತೂ ಮಾಸ್ತಿಯವರು ಬದುಕು ಮುಗಿಸಿದ್ದರೂ ಜಗತ್ತನ್ನು ತಿದ್ದುವ ಕಾಯಕ ಮುಗಿಸಿಲ್ಲ ನಿರಂತರ ನಡೆಸೇ ಇರುತ್ತಾರೆ ಎನಿಸುತ್ತದೆ.