skip to main |
skip to sidebar
ತಪ್ಪೊಪ್ಪಿಗೆ
ಒಂದು ಮುಂಜಾನೆ
ಚಂದ್ರುವಿಗೆ ಇದ್ದಕ್ಕಿದ್ದ ಹಾಗೆ ಕನಸೊಂದು ಬಿದ್ದ ಹಾಗಾಯಿತು. ಅವನಿಗೆ ತಾನು ಸತ್ಯವಂತನಾಗಬೇಕು ಎಂದು ಇದ್ದಕ್ಕಿದ್ದ ಹಾಗೆ ಅನಿಸತೊಡಗಿತು. ತಾನು ಈ ಮೊದಲು ಮಾಡಿರುವ ಪಾಪಗಳನ್ನೆಲ್ಲಾ ಪಟ್ಟಿ ಮಾಡಿ ಯಾರಿಗಾದರೂ ಒಪ್ಪಿಸಿ ಆತ್ಮಶುದ್ಧಿ ಮಾಡಿಕೊಳ್ಳಬೇಕೆನ್ನಿಸಿತು.
ಚಂದ್ರು ಧಡಕ್ಕನೆ ಎದ್ದು ನಿಂತ. ತಕ್ಷಣ ಕಾರ್ಯೋನ್ಮುಖನಾದ. ತನ್ನ ಕೃತ್ಯಗಳ ಬಗ್ಗೆ ಯೋಚಿಸತೊಡಗಿದ. ತಪ್ಪೊಪ್ಪಿಗೆ ಮಾಡಿಕೊಳ್ಳಬೇಕಾದರೆ ತನ್ನ ತಪ್ಪುಗಳನ್ನೆಲ್ಲಾ ನೆನಪು ಮಾಡಿಕೊಂಡು ಒಂದು ಕಾಗದದಲ್ಲಿ ಬರೆದಿಟ್ಟು ಯಾರ ಮುಂದಾದರೂ ಓದಿಬಿಡಬೇಕು. ಬರೆಯೋಣವೆಂದು ಲೇಖನಿ ಕೈಗೆತ್ತಿಕೊಂಡು ಅದನ್ನೇ ದೀರ್ಘವಾಗಿ ದಿಟ್ಟಿಸಿನೋಡಿ ನಂತರ ಬರೆದ.
ಒಂದು: ಈ ತಪ್ಪೊಪ್ಪಿಗೆ ಬರೆಯುತ್ತಾ ಇರುವ ಪೆನ್ನು ರಾಮೂದು. ನನ್ನ ಹತ್ತಿರ ಇದು ಇಲ್ಲಾ ಅಂತ ಸುಳ್ಳು ಹೇಳಿದ್ದೆ. ಇದನ್ನು ಈ ದಿನವೇ ವಾಪಸ್ಸು ಕೊಟ್ಟು ಪಾಪ ಮುಕ್ತನಾಗಬೇಕು. ಅವನಲ್ಲಿ ನನ್ನ ತಪ್ಪೊಪ್ಪಿಗೆ ಹೇಳಿಕೊಂಡು ಮರಳಿ ಬರಬೇಕು.
ಎರಡು: ವಯ್ಯಾಲಿಕಾವಲ್‌ನಲ್ಲಿ ಇರುವ ರಾಮೂಗೆ ಈ ಪೆನ್ನು ವಾಪಸ್ ಕೊಟ್ಟು ಬರಬೇಕಾದರೆ ಸುಧೀಂದ್ರನ ಸ್ಕೂಟರ್ ತೆಗೆದುಕೊಂಡು ಹೋಗಬೇಕು. ಪೆನ್ನು ವಾಪಸ್ಸು ಕೊಡೋದಕ್ಕೆ ಸ್ಕೂಟರ್ ಕೇಳಿದರೆ ಸುಧಿ ನಗುತ್ತಾನೆ. ಅದಕ್ಕೇ ಅವನಿಗೆ ಸುಳ್ಳು ಹೇಳಬೇಕು. ಸುಳ್ಳು ಹೇಳುವ ಯೋಚನೆ ಮಾಡಿದ್ದೇ ತಪ್ಪು. ಆ ಬಗ್ಗೆ ಒಂದು ತಪ್ಪೊಪ್ಪಿಗೆ. ಹೇಗಿದ್ದರೂ ಸ್ಕೂಟರ್ ಅಂತೂ ತೆಗೆದುಕೊಂಡು ಹೋಗುವುದು ಇದ್ದೇ ಇದೆ. ಆದ್ದರಿಂದ ಸುಳ್ಳು ಹೇಳುವುದು ತಪ್ಪುವುದಿಲ್ಲ. ಅದೊಂದು ತಪ್ಪು.
ಮೂರು: ಸ್ಕೂಟರ್ ತೆಗೆದುಕೊಂಡು ರಾಮೂನ ಮನೆಗೆ ಹೋದರೂ ಪೆನ್ನು ವಾಪಸ್ಸು ಕೊಡುವಾಗ ಅವನ ಹತ್ತಿರ ಯಾಕೆ ತಪ್ಪೊಪ್ಪಿಗೆ ಮಾಡಿಕೊಳ್ಳಬೇಕು? ನನ್ನನ್ನ ನಾನೇ ಸಮರ್ಥಿಸಿಕೊಳ್ಳುತ್ತೇನೆ. ಎಲ್ಲಾ ತಪ್ಪುಗಳನ್ನೂ ಸೇರಿಸಿ ಕಾಂಪ್ರಹೆನ್ಸಿವ್ ಆಗಿ ಒಬ್ಬರ ಹತ್ತಿರ ಹೇಳಿಕೊಂಡರೆ ಸಾಕಲ್ಲವೇ. ಆದರೆ ರಾಮೂನ ಹತ್ತಿರ ತಪ್ಪೊಪ್ಪಿಗೆ ಮಾಡಿಕೊಳ್ಳದಿರುವುದು ಒಂದು ತಪ್ಪು!
ನಾಲಕ್ಕು: ತಪ್ಪೊಪ್ಪಿಗೆಗೆ ವೇಣು ಸರಿಯಾದ ವ್ಯಕ್ತಿ. ಆದರೆ ವಿಚಾರವಾದಿಯಾದ ಅವನ ಹತ್ತಿರ ಕನಸಿನ ವಿಷಯ ಹೇಳಿದರೆ ನಕ್ಕುಬಿಡುತ್ತಾನೆ. ಅವನಿಗೊಂದು ಸುಳ್ಳು ಹೇಳಿಬಿಟ್ಟರಾಯಿತು. ಅದೊಂದೇ ತಪ್ಪೊಪ್ಪಿಗೆ ಬೇರೆಲ್ಲಾದರೂ ಮಾಡಿಕೊಳ್ಳಬೇಕು.
ಐದು: ಪೆನ್ನು ವಾಪಸ್ಸು ಕೊಡಬೇಕಾದ್ದು ಏಕೆ? ಸತ್ಯವಂತನಾಗಬೇಕು ಅಷ್ಟೇ ತಾನೆ? ಅದಕ್ಕೆ ತಪ್ಪೊಪ್ಪಿಗೆ ಮಾಡಿಕೊಳ್ಳಬೇಕು ನಿಜ. ತಪ್ಪುಗಳ ರಿಪೇರಿ ಮಾಡಬೇಕೇ? ಪೆನ್ನನ್ನು ವಾಪಸ್ ಕೊಡದಿದ್ದರೆ ಮೂರು ತಪ್ಪೊಪ್ಪಿಗೆಗಳು ನಿಲ್ಲುತ್ತವೆ. ಆದರೆ ಒಂದು ಒಳ್ಳೆಯ ವಿಚಾರ ಮನಸ್ಸಿಗೆ ಬಂದಾಗ ಅದನ್ನು ತಳ್ಳಿ ಹಾಕುವುದೊಂದು ತಪ್ಪು. ಹೀಗಾಗಿ ಈ ಬಗ್ಗೆ ಒಂದು ತಪ್ಪೊಪ್ಪಿಗೆ ಮಾಡಿಕೊಳ್ಳಬೇಕು.
ಆರು: ಪೆನ್ನಿನಂತಹ ಕ್ಷುಲ್ಲಕ ವಿಚಾರ ಹಿಡಿದು ಮೈನರ್ ತಪ್ಪೊಪ್ಪಿಗೆ ಮಾಡಿಕೊಂಡು ಮೇಜರ್ ತಪ್ಪೊಪ್ಪಿಗೆಗಳ ಬಗೆಗೆ ಮರೆಯುತ್ತಿರುವುದು ತಪ್ಪೇ? ಆ ಬಗ್ಗೆ ಒಂದು ತಪ್ಪೊಪ್ಪಿಗೆ.
ಏಳು: ಮೇಜರ್ ತಪ್ಪೆಂದರೇನು? ವೇಣುವಿನ ಹೆಂಡತಿಯ ಬಗ್ಗೆ ವಿಕೃತವಾಗಿ ಯೋಚಿಸಿದ್ದು ತಪ್ಪೇ. ಮೇಜರ್ ತಪ್ಪೇ? ಆಹಾ.. ಈ ಬಗೆಗೂ ಒಂದು ತಪ್ಪೊಪ್ಪಿಗೆ.
ಎಂಟು: ತಪ್ಪೊಪ್ಪಿಗೆ ನಂಬರ್ ಏಳು ಯಾರಲ್ಲಿ ಮಾಡಿಕೊಳ್ಳಬೇಕು? ವೇಣುವಿನ ಹೆಂಡತಿ ಬಗ್ಗೆ ಆದ್ದರಿಂದ ಅವಳಲ್ಲಿಯೇ ಮಾಡಿಕೊಂಡರೆ ಹೇಗೆ? ಅವಳಿಗೆ ಅದರಿಂದ ವಿಪರೀತ ನೋವು, ಯಾತನೆ, ಮಾನಸಿಕ ಕ್ಷೋಭೆ ಉಂಟಾದರೆ, ಅದಕ್ಕೆ ಕಾರಣೀಭೂತನಾಗಬಹುದಾದ್ದರಿಂದ, ಆ ಬಗ್ಗೆಯೂ ಒಂದು ತಪ್ಪೊಪ್ಪಿಗೆ. ಆದರೆ ಅವಳಿಗೆ ಇದರಿಂದ ನೋವಾಗದೇ ಖುಷಿಯಾದರೆ??!
ಒಂಬತ್ತು: ಎಂಟನೇ ತಪ್ಪೊಪ್ಪಿಗೆ ಮಾಡಿಕೊಂಡಾಗ ವೇಣುವಿನ ಹೆಂಡತಿ ಖುಷಿಗೊಂಡರೆ, ಅವಳು ನನ್ನನ್ನು ಪ್ರೋತ್ಸಾಹಿಸಿದರೆ ವೇಣುವಿಗೆ ಅನ್ಯಾಯ ಮಾಡಿದಂತಾಗುತ್ತದೆಯೇ? ಆ ಬಗ್ಗೆ ಒಂದು ತಪ್ಪೊಪ್ಪಿಗೆ ಬೇಕೇನೋ..
ಹತ್ತು: ವೇಣುವಿಗೂ ಈ ವಿಷಯ ಕೇಳಿ ಬೇಸರವೇನೂ ಆಗಲಿಲ್ಲವೆಂದುಕೊಳ್ಳಿ. ಹಾಗಾದರೆ ಇಂಥಾ ಗೊಡ್ಡು ಭಾವನಾರಹಿತ ವ್ಯಕ್ತಿಯಲ್ಲಿ ತಪ್ಪೊಪ್ಪಿಗೆ ಮಾಡಿಕೊಂಡ ನಾನೆಷ್ಟು ಭಂಡನಿರಬೇಕು. ಇದೇ ಅನ್ಯಾಯವೆನ್ನುವುದಾದರೆ ಈ ಬಗ್ಗೆಯೂ... ತಪ್ಪೊಪ್ಪಿಗೆಯ ಉದ್ದೇಶಕ್ಕೇ ಇದರಿಂದ ಪೆಟ್ಟು ಬೀಳುವುದಾದರೆ ಆ ಬಗ್ಗೆಯೂ ಒಂದು...
ಹನ್ನೊಂದು: ತಪ್ಪೊಪ್ಪಿಗೆಯಿಂದ ಇಷ್ಟೆಲ್ಲಾ ಮಂದಿಗೆ ಮಾನಸಿಕ ಕ್ಷೋಭೆಯಾಗುವುದರಿಂದ, ಈ ತಪ್ಪೊಪ್ಪಿಗೆಯೇ ಒಂದು ತಪ್ಪಾದೀತು. ಈ ಬಗ್ಗೆ ಒಂದು....
ಹನ್ನೆರಡು: ಈ ತಪ್ಪೊಪ್ಪಿಗೆಯ ತಪ್ಪು ಕನಸು ಕಂಡು ತಪ್ಪು ತಪ್ಪಾಗಿ ಯೋಚಿಸಿ ಸುಮ್ಮನಿದ್ದು ಬಿಡುವುದೆಂಬ ತಪ್ಪು ನಿರ್ಧಾರಕ್ಕೆ ಬಂದು ಸುಮ್ಮನೆಯೇ ಇದ್ದು ಬಿಟ್ಟರೆ ಆ ......
ಆ... ಎನ್ನುತ್ತಿದ್ದಂತೆ ಚಂದ್ರುವಿಗೆ ಆಕಳಿಕೆ ಬಂತು. ಮತ್ತೆ ಮಲಗೋಣವೆನ್ನಿಸಿ ಸ್ವರತಿಯಲ್ಲಿ ತೊಡಗಿ ಹಾಗೇ ನಿದ್ದೆ ಮಾಡಿದ.
ಮತ್ತೆ ಎಚ್ಚರವಾದಾಗ ಮುಂಜಾನೆಯ ಕನಸಿನ ಬಗ್ಗೆ ನೆನಪಾಯಿತು. ಪಕ್ಕದಲ್ಲಿದ್ದ ತಪ್ಪೊಪ್ಪಿಗೆಯ ಕಾಗದೆ ಬಿಡಿಸಿ ನೋಡಿದ. ಎಲ್ಲವೂ ಖಾಲಿ! ಅಬ್ಬ! ಸದ್ಯ! ಎಲ್ಲವೂ ಕೆಟ್ಟ ಕನಸಿರಬೇಕು ಎಂದುಕೊಂಡು ಕುರ್ಚಿಗೊರಗಿ ಸೂರಿನತ್ತ ನೋಡಿದ. ರಾಮುವಿನ ಪೆನ್ನು ಡೆಮೊಕಲ್ಸ್ ನ ಕತ್ತಿಯಂತೆ ಸೂರಿನಿಂದ ನೇರವಾಗಿ ಇವನ ತಲೆಯ ಮೇಲೆ ತಲೆ ತಾಕುತ್ತಿರುವಂತೆ ನೇತಾಡುತ್ತಿತ್ತು. ಚಂದ್ರು ಅದನ್ನೆ ತದೇಕಚಿತ್ತ ನೋಡುತ್ತಿದ್ದ. ತೆರೆದ ಅವನ ಕಣ್ಣು ಮುಚ್ಚಲೇ ಇಲ್ಲ. ಒಂದು ಕ್ಷಣ ಮಿಟುಕಿಸಲೂ ಸಾಧ್ಯವಾಗದಷ್ಟು ನಿಶ್ಚಲವಾಗಿ ಸೂರು ದಿಟ್ಟಿಸುತ್ತಾ ಕುಳಿತೇ ಇದ್ದ. ಕೂಡ್ರಿಸಿಟ್ಟ ಶವದಂತೆ!
೧೯೮೮
No comments:
Post a Comment