Tuesday, June 17, 2008

ನೀತಿ



ಅದೊಂದು ಕಾಗದದ ಕಾರ್ಖಾನೆ.
ದಪ್ಪ ಕಾಗದದ ಒಂದು ಬಂಡಲ್ ಇನ್ನೊಂದರೊಂದಿಗೆ ಮಾತಾಡುತ್ತಿತ್ತು
“ವಿಪರೀತವಾಗಿ ಮೈ ಬಂದುಬಿಟ್ಟಿದೆ ಇಳಿಸಬೇಕು”
“ಛೆ ಛೆ ಆ ಮೂರ್ಖತನ ಮಾತ್ರ ಮಾಡಬೇಡ.”
“ಯಾಕೆ? ಮಾನವರಲ್ಲಿ ಅದರಲ್ಲೂ ಹೆಂಗಸರಲ್ಲಿ ಬೊಜ್ಜಿಳಿಸುವುದ್ ಫ್ಯಾಷನ್ ಆಗಿದೆಯಲ್ಲಾ.. ಎಲ್ಲೆಲ್ಲೂ ಸ್ಲಿಮಿಂಗ್ ಸೆಂಟರುಗಳು, ಜಿಮ್ಮುಗಳು.. ಇತ್ಯಾದಿ..”
“ಒಂದು ಕಥೆ ಹೇಳ್ತೇನೆ ಕೇಳು, ಇದು ನಮ್ಮ ನಿಮ್ಮಮ್ಮನ ಕಾಲದ್ದು. ಹೀಗೇ ನಿಮ್ಮಮ್ಮ ಸಹ ಬೊಜ್ಜಿಳಿಸಬೇಕೂಂತ ಒದ್ದಾಡಿದ್ಲು”
“ಆಮೇಲೆ?”
“ನಮ್ಮಮ್ಮ ಹಾಗಲ್ಲ, ಯಾವ ಯೋಚನೆಯೂ ಇಲ್ಲದೇ ಆರಾಮವಾಗಿ ಇದ್ಲು.”
“ಮುಂದೇನಾಯ್ತು?”
“ನಮ್ಮಮ್ಮನ್ನ ನಾಸಿಕಕ್ಕೆ ಕರ್‍ಕೊಂಡು ಹೋದ್ರು. ಅವಳನ್ನ ನೂರು ರೂಪಾಯಿ ನೋಟಾಗಿ ಛಾಪಿಸಿದರು.”
“ಸರಿ... ಆದ್ರೇನು?”
“ಕೇಳು ಹೇಳೋದನ್ನ.. ಅವಳಿನ್ನೂ ಬದುಕಿದ್ದಾಳೆ. ಚಿರಂಜೀವಿ ಅವಳು. ಅವಳ ಕಿಮ್ಮತ್ತು ಇಂದಿಗೂ ಒಂದು ಪೈಸೆ ಸಹ ಇಳಿದಿಲ್ಲ.”
“ನಮ್ಮಮ್ಮ?”
“ನಿಮ್ಮಮ್ಮ ತೆಳುವಾದಳು. ಆದಳು. ಆಗುತ್ತಲೇ ಹೋದಳು.”
“ಆಮೇಲೇನಾಯ್ತು?”
“ಅವಳನ್ನು ಒಂದು ಫೈವ್ ಸ್ಟಾರ್ ಹೊಟೇಲಿಗೆ ಕೊಂಡೊಯ್ದರು. ಟಾಯ್‌ಲೆಟ್‌ನಲ್ಲಿಟ್ಟು ಟಿಷ್ಯೂ ಅಂತ ಕರೆದರು. ಕಡೆಗೊಂದು ದಿನ ಯಾರೋ ಬಿಳಿ ಚರ್ಮದವನು ಉಪಯೋಗಿಸಿ ಫ್ಲಷ್ ಮಾಡಿಬಿಟ್ಟ.”
“ಅಯ್ಯಯ್ಯೋ..!”
“ಈ ಕಥೆಯ ನೀತಿ ಗೊತ್ತಾಯ್ತಾ?”
“ಏನು?”‘
“ಎಲ್ಲಕ್ಕೂ ನೀನು ಮಾನವರನ್ನು ಮಾದರಿಯಾಗಿ ತೆಗೊಳ್ಬೇಡ.”


ಆಗಸ್ಟ್ ೧೯೮೬