Sunday, November 9, 2008

ಬದುಕಿಗೆ ಅರ್ಥ


ಅವನ ಕೆಲಸದ ಬಗ್ಗೆ ಯಾರು ಕೇಳಿದರೂ ಅರ್ಥಗರ್ಭಿತವಾಗಿ ನಕ್ಕು ಸುಮ್ಮನಾಗಿಬಿಡುತ್ತಿದ್ದ. ಹೀಗೊಂದು ಕೆಲಸವೂ ಇರಬಹುದೇ ಎಂದು ಆಶ್ಚರ್ಯವೂ ಆಗಬಹುದು. ಆದರೆ ನಂಬಿ, ಅವನು ಪ್ರತಿದಿನ ಮುಂಜಾನೆ ಎದ್ದು ತಲೆ ತಗ್ಗಿಸಿ ನಡೆಯುತ್ತಾ ಇರುತ್ತಿದ್ದ. ದಿನಕ್ಕೆ ಇಪ್ಪತ್ತು ಮುವ್ವತ್ತು ಕಿಲೋಮೀಟರ್ ನಡೆದರೆ ಅವನಿಗೆ ಅಂದಿನ ಊಟಕ್ಕೆ ಆಗುವಷ್ಟು ಸಿಗುತ್ತಿತ್ತು, ಜೊತೆಗೆ ಸ್ವಲ್ಪ ಉಳಿತಾಯವೂ ಆಗುತ್ತಿತ್ತು. ಅವನು ಆಚೆ ಕಾಲಿಟ್ಟು ಬರಿಗೈನಲ್ಲಿ ಹಿಂದಿರುಗಿದ ಪ್ರಸಂಗವೇ ಇರಲಿಲ್ಲ. 

ತಲೆ ತಗ್ಗಿಸಿ ದೃಷ್ಟಿಯನ್ನು ತೀಕ್ಷ್ಣವಾಗಿ ನೆಲದ ಮೇಲೆ ಕೇಂದ್ರೀಕರಿಸಿ ನಡೆದರೆ ಅವನ ದೃಷ್ಟಿಗೆ ಚಿಲ್ಲರೆ ಕಾಸು ಕಾಣಿಸುತ್ತಿತ್ತು. ಎಷ್ಟೋ ಬಾರಿ ಒಮ್ಮೊಮ್ಮೆ ನೋಟುಗಳೂ ಸಿಗುವುದಿತ್ತು. ಆದರೆ ಸರಿಯಾದ ಸಂಪಾದನೆಗೆ ಸ್ವಲ್ಪ ದುಡ್ಡನ್ನು ಮೂಲಧನವಾಗಿ ಹೂಡಬೇಕಿತ್ತು. ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ದುಡ್ಡು, ಮತ್ತು ಇತರೆ ವಸ್ತುಗಳು ಸಿಗುವ ಸಾಧ್ಯತೆ ಹೆಚ್ಚಿತ್ತು. ಉದಾಹರಣೆಗೆ ಬಸ್ಸನ್ನು ಹತ್ತಿದರೆ ಹುಡುಕಾಟದ ನಿಯಮಾನುಸಾರ ಕಡೆಯ ಸ್ಟಾಪಿನಲ್ಲಿ ಎಲ್ಲರೂ ಇಳಿದ ನಂತರ ಇಡೀ ಬಸ್ಸಿನಲ್ಲಿ ಕಣ್ಣು ಹಾಯಿಸಿ ಕಂಡಕ್ಟರ್ ಮತ್ತು ಚಾಲಕನಿಗೆ ಅನುಮಾನ ಬರದಂತೆ ಕಂಡ ಅನಾಥವಸ್ತುವನ್ನು ಎತ್ತಿ ತನ್ನದೇ ಎಂಬಂತೆ ಸಹಜವಾಗಿ ಹಿಡಿದು ತರಬೇಕಿತ್ತು. ಇಲ್ಲವೇ ರೈಲು ನಿಲ್ದಾಣಕ್ಕೆ ಹೋಗಿ ಎಲ್ಲರೂ ಇಳಿದ ನಂತರ ಬೋಗಿಗಳಲ್ಲಿ ಒಂದು ಸುತ್ತು ಹಾಕಿ ಬರಬೇಕಿತ್ತು. ಅದಕ್ಕೆ ಅನುಮಾನ ಬರದಂತೆ ಪ್ಲಾಟ್ ಫಾರಂ ಟಿಕೇಟನ್ನು ಕೊಳ್ಳಬೇಕಿತ್ತು. ಅಥವಾ ಸಿನೇಮಾ ಹಾಲಿನಲ್ಲಿ ಸಿನೇಮಾ ನೋಡಿ ವಾಪಸ್ಸಾಗುವ ಗಳಿಗೆಯಲ್ಲಿ ದೀಪಗಳನ್ನಾರಿಸುವ ಮುನ್ನ ಚಾಕಚಕ್ಯತೆಯಿಂದ ತನ್ನ ಕೆಲಸವನ್ನು ಮಾಡಬೇಕಿತ್ತು.

ಹೀಗೆ ಸಿಕ್ಕ ಹಣ, ವಸ್ತುಗಳು ಎರಡು ಥರದ್ದಾಗಿರುತ್ತಿದ್ದವು. ಮೊದಲನೆಯದೆಂದರೆ ಆ ವಸ್ತುವಿನ ಮಾಲೀಕರು ಯಾರು ಎನ್ನುವುದರ ಬಗ್ಗೆ ಸುಳಿವು ಇರುವಂತಹ ವಸ್ತುಗಳು. ಬ್ಯಾಗುಗಳಲ್ಲಿನ ವಿಳಾಸ, ಐ.ಡಿ.ಕಾರ್ಡು, ಕ್ರೆಡಿಟ್ ಕಾರ್ಡು, ಮೊಬೈಲ್ ಫೋನು ಇವುಗಳೆಲ್ಲ ಈ ಜಾತಿಗೆ ಸೇರಿದವು. ಎರಡನೆಯದೆಂದರೆ ಬರೇ ದುಡ್ಡು, ಅನಾಥವಾಗಿ ಬಿದ್ದಿರುವ ಬುಟ್ಟಿ, ಬಿಟ್ಟು ಹೋದ ಛತ್ರಿ, ಹೀಗೆ ಅದನ್ನು ಕಳೆದುಕೊಂಡವರು ಯಾರೆಂದು ತಿಳಿಯದೇ ಇರುವಂಥವು. ಇದ್ದಂತಹದ್ದನ್ನು ಯಾವುದೇ ಪಾಪಪ್ರಜ್ಞೆಯೂ ಇಲ್ಲದೇ ಅವನು ತೆಗೆದೊಯ್ಯಬಹುದಿತ್ತು. ಈ ಧಂಧೆಗಿಳಿದಾಗ ಅವನು ಆಗಾಗ ಯೋಚಿಸಿದ್ದುಂಟು: ಇದಕ್ಕೂ ಕಳ್ಳತನಕ್ಕೂ ವ್ಯತ್ಯಾಸವೇನು? ಅಂತ. ತನ್ನ ಕಾಯಕ ಇತರರಿಂದ ಕಸಿಯುವುದಾಗಿರಲಿಲ್ಲ. ಆದರೆ ಅವರೇ ಕಳಕೊಂಡ ವಸ್ತುಗಳನ್ನು ಹೆಕ್ಕಿ ತೆಗೆಯುವುದರಲ್ಲಿ ತಾನು ನಿಪುಣನಾದ್ದರಿಂದ ಇದು ತನ್ನ ಆದಾಯ ಎಂದು ಅವನು ಪರಿಗಣಿಸಬಹುದಿತ್ತು. ಜೊತೆಗೆ ಅದು ಯಾರಿಗೆ ಸಂದಿದ್ದೆಂದು ತಿಳಿಯದ್ದರಿಂದ, ತಿಳಿಯುವ ಸಾಧ್ಯತೆ ಇರಲಿಲ್ಲವಾದ್ದರಿಂದ, ತಾನು ತೆಗೆದುಕೊಂಡು ಹೋಗುವುದರಲ್ಲಿ ಅವನಿಗೆ ತಪ್ಪೇನೂ ಕಾಣಿಸಲಿಲ್ಲ. ಆದ್ದರಿಂದಲೇ ಮೊದಮೊದಲಿಗೆ ಅವನು ಬರೇ ನೆಲದ ಮೇಲೆ ಬಿದ್ದಿದ್ದ ದುಡ್ಡನ್ನು ಮಾತ್ರ ಹೆಕ್ಕುತ್ತಿದ್ದ. ಮಿಕ್ಕ ವಸ್ತುಗಳನ್ನು ಹಾಗೆಯೇ ಬಿಟ್ಟುಬಿಡುತ್ತಿದ್ದ. ಆದರೆ ನಂತರ ನಡೆದ ಘಟನೆಯಿಂದ ಅವನು ಸ್ವಲ್ಪ ಬದಲಾಗಿದ್ದ.

ಒಂದು ದಿನ ಅವನಿಗೆ ಒಂದು ಕವರ್ ಕಂಡಿತು. ಕುತೂಹಲ ತಡೆಯಲಾರದೇ ಅದನ್ನು ಎತ್ತಿಕೊಂಡ. ಅದರಲ್ಲಿ ಯುವಕನೊಬ್ಬನ ಸರ್ಟಿಫಿಕೇಟುಗಳು, ಸಂದರ್ಶನಕ್ಕೆ ಆಹ್ವಾನಿಸುತ್ತ ಒಂದು ಪತ್ರ ಮತ್ತು ಇತರೆ ಕಾಗದಗಳಿದ್ದವು. ಒಂದು ಕ್ಷಣಕ್ಕೆ ಅವನಿಗೆ ಏನು ಮಾಡಬೇಕೋ ತೋರಲಿಲ್ಲ. ಇದನ್ನು ಆ ಯುವಕನಿಗೆ ತಲುಪಿಸಿದರೆ ಅವನಿಗೆ ನೌಕರಿ ಸಿಗಬಹುದು. ಇಲ್ಲವಾದರೆ ಆ ಯುವಕನಿಗೆ ಅನೇಕ ದಿನಗಳಕಾಲ ತೊಂದರೆಯಂತೂ ಉಂಟಾಗುತ್ತದೆ. ಇದನ್ನು ಆ ಯುವಕನಿಗೆ ತಲುಪಿಸಲು ಹೆಚ್ಚಿನ ಶ್ರಮವೇನೂ ಪಡಬೇಕಿರಲಿಲ್ಲ. ಸಂದರ್ಶನವಾಗಬೇಕಿದ್ದ ಕಂಪನಿಯ ದಫ್ತರು ಸಮೀಪದಲ್ಲೇ ಇತ್ತು. ಅವನು ಬೇಗ ಅಲ್ಲಿಗೆ ಹೋದರೆ ಆ ಯುವಕನಿಗೆ ಈ ಪ್ಯಾಕೆಟ್ಟನ್ನು ಸಮಯಕ್ಕೆ ತಲುಪಿಸಬಹುದಿತ್ತು. ಹೀಗಂದುಕೊಂಡ ಕೂಡಲೇ ಅವನು ಆ ಪ್ಯಾಕೆಟ್ಟನ್ನು ಒಯ್ದು ಆ ಯುವಕನನ್ನು ಹುಡುಕಿ ಅವನಿಗೆ ಕೊಟ್ಟ. ಅಂದಿನಿಂದಾದಿಯಾಗಿ ಬರೇ ಹಣ ಹೆಕ್ಕಿ ತೆಗೆಯುತ್ತೇನೆ ಅನ್ನುವ ತನ್ನ ನಿಯಮವನ್ನು ಮೀರಿ ಎಲ್ಲವನ್ನೂ ತೆಗೆಯುವುದು, ಆ ವಸ್ತುವನ್ನು ತಲುಪಿಸುವ ಮಾರ್ಗ ತಿಳಿದರೆ ಅದರ ಮಾಲೀಕರಿಗೆ ತಲುಪಿಸುವುದು. ಇಲ್ಲವಾದರೆ ತಾನೇ ಇಟ್ಟುಕೊಳ್ಳುವುದು. ಹೀಗೆ ಜನರಿಗೆ ವಸ್ತುಗಳನ್ನು ತಲುಪಿಸುವುದರಿಂದ ಅವನಲ್ಲಿರಬಹುದಾಗಿದ್ದ ಪಾಪ ಪ್ರಜ್ಞೆಯೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ ಅವನ ಕಾಯಕದ ಬಗ್ಗೆ ಒಮ್ಮೊಮ್ಮೆ ಹೆಮ್ಮೆಯೂ ಉಂಟಾಗುತ್ತಿತ್ತು.

ಜೀವನ ಹೀಗೆ ಸುಖವಾಗಿಯೇ ನಡೆದಿತ್ತು. ತಾನು ಈ ರೀತಿಯಾಗಿ ಸಂಪಾದಿಸುವುದಲ್ಲದೇ, ತಮ್ಮ ಬಗೆಗಿನ ಸುಳಿವುಗಳನ್ನು ಬಿಟ್ಟುಕೊಟ್ಟವರಿಗೆ ಅವರವರ ವಸ್ತುಗಳನ್ನು ಹಿಂದಿರುಗಿಸುವ ಸೇವೆಯನ್ನೂ ಮಾಡುತ್ತಿದ್ದೇನೆಂಬ ಸಂಭ್ರಮ ಅವನಿಗಿತ್ತು. ಹಣದ ಹುಡುಕಾಟದಿಂದ ಆರಂಭವಾದರೂ ಈ ಕಾಯಕ ಅವನಿಗೆ ಹಣಕ್ಕಿಂತ ಹೆಚ್ಚಾದ ಕಾಣ್ಕೆಯನ್ನು ನೀಡಿತ್ತು. ಆದರೆ ಒಂದು ಬಾರಿ ಮಾತ್ರ ಅವನು ತನಗೆ ಕಂಡ ವಸ್ತುವನ್ನು ಎತ್ತಲಾರದೇ - ಏನು ಮಾಡಬೇಕೋ ತೋರದೇ - ಅವಾಕ್ಕಾಗಿ ಬಿಟ್ಟಿದ್ದ. ಒಂದು ಸಿನೇಮಾ ಥಿಯೆಟರಿನಲ್ಲಿ ಸಿನೆಮಾದ ನಂತರ ತನ್ನ ತೀಕ್ಷ್ಣ ದೃಷ್ಟಿಯನ್ನು ಹರಿಯ ಬಿಟ್ಟಾಗ ಸೀಟಿನಮೇಲೆ ಕೆಲದಿನಗಳ ಹಿಂದಷ್ಟೇ ಹುಟ್ಟಿರಬಹುದಾದ ಹಸುಗೂಸೊಂದು ಕಂಡಿತು. ತನ್ನ ನಿಯಮಾನುಸಾರ ಅದರ ಮಾಲೀಕರ ವಿಳಾಸ ತಿಳಿಯದಿದ್ದಲ್ಲಿ ತಾನೇ ಅದನ್ನು ಕೊಂಡೊಯ್ದು ಇಟ್ಟುಕೊಳ್ಳಬೇಕಿತ್ತು. ಆದರೆ ಆದಿನ ಮಾತ್ರ ಅವನು ತನ್ನ ನಿಯಮವನ್ನು ಪಾಲಿಸದೇ ಅಲ್ಲಿಂದ ಕಂಬಿ ಕಿತ್ತಿದ್ದ!

ಮತ್ತೊಂದು ದಿನ ಅವನಿಗೆ ನಿಂತ ಬಸ್ಸಿನಲ್ಲಿ ಒಂದು ಟಿಫಿನ್ ಡಬ್ಬ, ಅದರ ಜೊತೆಗೆ ಒಂದು ವಾರ್ತಾಪತ್ರಿಕೆ ದೊರೆತಿತ್ತು. ವಾರ್ತಾಪತ್ರಿಕೆ ಹಿಂದಿ ಭಾಷೆಯಲ್ಲಿತ್ತು. ಜೊತೆಗೆ ಅದರ ತಾರೀಖು ಎರಡು ವರ್ಷಗಳಿಗೂ ಹಿಂದಿನದ್ದಾಗಿತ್ತು. ಅದರಲ್ಲಿ ಪ್ರಮುಖವಾಗಿ ಕಾಣಿಸುತ್ತಿದ್ದ ಸುದ್ದಿ ಎಂದರೆ ಟಿಫಿನ್ ಡಬ್ಬದಲ್ಲಿ ಟೈಮರ್ ಜೋಡಿಸಿದ ಸ್ಫೋಟಕ ಪದಾರ್ಥಗಳನ್ನಿಟ್ಟು ಬಸ್ಸಿನಲ್ಲಿ ಬಿಟ್ಟುಹೋದ ಆತಂಕವಾದಿಗಳ ಬಗ್ಗೆ ಒಂದು ವರದಿಯಾಗಿತ್ತು. ಈ ರೀತಿಯ ಘಟನೆಗಳು ಹಿಂದೆ ದೆಹಲಿಯಲ್ಲಿ ನಡೆದಿದ್ದವೆಂದು ಅವನು ಕೇಳಿದ್ದ. ಆದರೆ ಈ ಪ್ರಾಂತದಲ್ಲಿ ಇಂಥ ಯಾವ ಘಟನೆಯೂ ನಡಿದ ನೆನಪು ಅವನಿಗಿಲ್ಲ.

ಆ ಪತ್ರಿಕೆಯ ಮೇಲೆ ಕಣ್ಣು ಹಾಯಿಸಿದ. ಡಬ್ಬವನ್ನು ತೆಗೆಯಬೇಕೋ ಇಲ್ಲವೋ ಆಲೋಚಿಸಿದ. ತನ್ನ ಮೇಲೆ ತಾನೇ ಹೇರಿಕೊಂಡ ಕಾಯಕದ ಧರ್ಮದ ಪ್ರಕಾರ ಅವನು ಆ ಡಬ್ಬವನ್ನುತೆರೆದು ನೋಡಬೇಕಿತ್ತು. ಅದರಲ್ಲಿ ಮಾಲೀಕರ ಸುಳಿವಿಲ್ಲದಿದ್ದರೆ ತಾನೇ ಅದನ್ನು ಇಟ್ಟುಕೊಳ್ಳಬೇಕಿತ್ತು. ಇಲ್ಲವಾದರೆ ಮಾಲೀಕರಿಗೆ ತಲುಪಿಸಬೇಕಿತ್ತು. ಅದೂ ಇಲ್ಲವೆಂದರೆ ಕೂಸನ್ನು ಬಿಟ್ಟುಹೋದ ಹಾಗೆ ಅದನ್ನು ಅಲ್ಲೇ ಬಿಟ್ಟು ಹೋಗಬೇಕಿತ್ತು. ಆದರೆ ಬಿಟ್ಟುಹೋದರೆ ಪೀಕ್ ಅವರ್ ನಲ್ಲಿ ಕಚಾಕಚ್ ತುಂಬಬಹುದಾದ ಬಸ್ಸಿನ ಪ್ರಯಾಣಿಕರ ಪಾಲಾಗುತ್ತದೆ ಆ ಟಿಫಿನ್ ಡಬ್ಬ. ಏನು ಮಾಡುವುದು? 

ಯೋಚಿಸಿದ. 

ಮಾರನೆಯ ದಿನ ಎಂದಿನಂತೆ, ದೆಹಲಿಯಂತೆ, ಎಲ್ಲೆಡೆಯಂತೆ ಈ ಊರಿನಲ್ಲಿಯೂ ವಾರ್ತಾಪತ್ರಿಕೆ ಪ್ರಕಟಗೊಂಡಿತು.

೮ ಸೆಪ್ಟೆಂಬರ್ ೨೦೦೬.1 comment:

JAYADEVA PRASAD MOLEYAR said...

nice. makes a good reading !!
jayadev