Tuesday, June 17, 2008

ವರ್ಣಭೇದ



ಒಂದೂರು.
‘ಛೆ ಬೇಡ. ಪ್ರತೀ ಕಥೆಯೂ ಹೀಗೇ ಪ್ರಾರಂಭವಾಗುತ್ತೆ.’
ಸರಿ. ಇನ್ನೊಂದೂರು.
‘ಇನ್ನೊಂದೂರು ಅನ್ನೋದು ಕೂಡ ಒಂದು ಊರೇ ಅಲ್ಲವೇ?’
ಸರಿ, ಸರಿ, ಒಂದು ಪ್ರಪಂಚಾತಲೇ ಇಟ್ಟುಕೊಳ್ಳೋಣ...

ಒಂದು ಪ್ರಪಂಚ.
ಅಲ್ಲೀ ಕಪ್ಪು ಬಿಳುಪು - ಎರಡು ಬಣ್ಣಗಳು ವಾಸವಾಗಿದ್ದುವು.
ಬ್ಲ್ಯಾಕ್ ಇಸ್ ಬ್ಯೂಟಿಫುಲ್ ಎಂಬ ಚೆಂದದ ಮಾತನ್ನು ಆ ಪ್ರಪಂಚದವರು ಹೇಳುತ್ತಿದ್ದರೂ ಎಲ್ಲರೂ ಬಿಳುಪನ್ನೇ ಇಷ್ಟಪಡುತ್ತಿದ್ದರು.

ಕಪ್ಪು ಸಹ ನಮ್ಮ ಸಹೋದರ, ಕಪ್ಪನ್ನೂ ನೀವು ಬಿಳಿಯಂತೆಯೇ ಪ್ರೀತಿಸಿ. ಪಕ್ಕದ ಮನೆಯ ಕಪ್ಪು ವರ್ಣಕ್ಕೂ, ಬಿಳಿಯದಿರುವುದಕ್ಕೆ ಇರುವಂತಹ ಗುಣಗಳೂ, ಅಂಗಾಂಗಗಳೂ ಇವೆ. ಆಫ್ಟರಾಲ್ ಕಲರಿನಲ್ಲೇನಿದೆ? ಹೃದಯ ಮುಖ್ಯ. ಎಂದೆಲ್ಲಾ ಏಸುವಿನೋಪಾದಿಯಲ್ಲಿ ಭಾಷಣಗಳು ಬಿಗಿಯಲ್ಪಟ್ಟುವು. ಕಡೆಗೆ ಕಪ್ಪು ಪ್ರೀತಿಸಲ್ಪಡದಿದ್ದಲ್ಲಿ ಆಟೋಟಗಳಲ್ಲಿ ಮತ್ತು ಸಾಮಾಜಿಕ ಲಾವಾದೇವಿಗಳಲ್ಲಿ ಬಿಳಿಯ ಬಣ್ಣಕ್ಕೆ ಬಹಿಷ್ಕಾರ ಹಾಕುತ್ತೇನೆ ಎಂದು ಕೂಡಾ ಹೆದರಿಸಲಾಯಿತು.

ಏನೇನು ಮಾಡಿದರೂ ಕಪ್ಪಿನ ಸ್ಥಾನ ಕಪ್ಪಿಗೇ, ಬಿಳಿಯ ಸ್ಥಾನ ಬಿಳಿಗೇ. ಇದರ ಅಂತರಾರ್ಥ ಏನೆಂದು ಯಾರಿಗೂ ತಿಳಿಯಲಿಲ್ಲ. ಬಿಳಿ ವರ್ಣಕ್ಕೆ ಇದರ ಬಗ್ಗೆ ಹೊಡೆದಾಡುತ್ತಿರುವ ಜನರನ್ನು ಕಂಡು ಹಾಸ್ಯ. ಅದು ಗಹಗಹಿಸಿ ನಗುತ್ತದೆ. ಅದಕ್ಕೆ ಗೊತ್ತು. ಎಂದೆಂದಿಗೂ ಈ ಪ್ರಪಂಚದಲ್ಲಿ ತನ್ನದೇ ದಬ್ಬಾಳಿಗೆ ನಡೆಯುತ್ತದೆ ಎಂದು. ಯಾರೋ ಬಿಳಿಯನ್ನು ಕೇಳಿದರು: ‘ಇಷ್ಟುದಿನದಿಂದ ಪ್ರಯತ್ನಿಸಿದರೂ ಯಾಕೆ ಕಪ್ಪು ಈವರೆಗೆ ಗೆದ್ದೇ ಇಲ್ಲ?’

ಬಿಳಿ ಮಂದಹಾಸ ಬೀರಿ ಹೇಳಿತು. ‘ನೋಡು ನನ್ನ ಮುಖದ ಮೇಲೆ ಕರಿಯ ಬಣ್ಣ ಮೆತ್ತಿಕೊಂಡರೆ ನಾನು ಕರಿಯನಿಗಿಂತ ಕಪ್ಪಾಗಬಲ್ಲೆ. ಆದರೆ ಎಷ್ಟು ಸುಣ್ಣ ಬಳಿದುಕೊಂಡರೂ ಕಪ್ಪು ಬಿಳಿಯಾಗಲಾರದು. ಹೆಚ್ಚೆಂದರೆ ಬೂದು ಬಣ್ಣವಾಗುತ್ತದೆ. ಬೆಳಕಿನ ರೂಪದಲ್ಲೂ ನನ್ನ ಅಸ್ತಿತ್ವ ಅನಿವಾರ್ಯ. ಕಪ್ಪು ಜೀವನದಲ್ಲಿನ ಕತ್ತಲೆಯನ್ನು ಸಂಕೇತಿಸುತ್ತದೆ.. ಎಬೊವ್ ಆಲ್ ನನಗೆ ಬಹುಸಂಖ್ಯಾತರಾಗಿರುವ ನನ್ನ ಜನಾಂಗದ ಸಪೋರ್ಟ್ ಇದೆ. .. ಏಳು ವರ್ಣಗಳ ಸಪೋರ್ಟ್ ಇದೆ. ಕಪ್ಪು ಎಂದಿಗೂ ಗೆಲ್ಲಲು ಸಾಧ್ಯವೇ ಇಲ್ಲ.’

ಆಗಸ್ಟ್ ೧೯೮೭

No comments: