
ಒಂದೂರು. ಅಲ್ಲೊಂದು ಬಸವನ ಹುಳು ಇತ್ತು. ಅದನ್ನು ‘ಪ್ರಗತಿ’ ಎಂದು ಕರೆಯೋಣ.
ಪ್ರಗತಿ ಮುಂದೆ ಸಾಗುತ್ತಿತ್ತು. ಎಲ್ಲವೂ ಚೆನ್ನಾಗಿಯೇ ಇತ್ತು. ನಿಧಾನವಾಗಿಯಾದರೂ ಪ್ರಗತಿ ಮುಂದೆ ಹೋಗುತ್ತಿದೆಯಲ್ಲಾ ಎಂದು ಅದನ್ನು ನೋಡಿದವರು ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದರು.
ಒಂದು ದಿನ ಒಂದು ಗೋಸುಂಬೆ ಪ್ರಗತಿಯನ್ನು ನೋಡಿತು. ಅದಕ್ಕೇಕೋ ಪ್ರಗತಿಯನ್ನು ಕಂಡರೆ ವಿಸ್ಮಯವಾಗುತ್ತಿತ್ತು. ಅದರೊಂದಿಗೆ ಆಟವಾಡೋಣವೆನ್ನಿಸಿತು. ಜೊತೆಗೆ ಗೋಸುಂಬೆಗೆ ಸಂಶೋಧನಾದೃಷ್ಟಿ ಬೇರೆ!
ಗೋಸುಂಬೆ ಸುಮ್ಮನಿರಲಾರದೇ ಪಕ್ಕದೂರಿನ ಸಂತೆಗೆ ಹೋಯಿತು. ಅಲ್ಲಿದ್ದ ಶ್ರೀಸಾಮಾನ್ಯನೊಬ್ಬನ ಬಳಿ ‘ಅಧಿಕಾರ’ ಎಂದು ಮೇಲೆ ಬರೆದಿದ್ದ ತಗಡಿನ ಪೆಟ್ಟಿಗೆಯಿತ್ತು. ಗೋಸುಂಬೆ ಅವನ ಬಳಿ ವ್ಯಾಪಾರಕ್ಕಿಳಿಯಿತು. ಅವನಿಗೊಂದು ಪಂಚೆ, ಅವನ ಹೆಂಡತಿಗೊಂದು ನೂಲಿನ ಸೀರೆ ಮತ್ತು ಕುಡಿಯಲೊಂದಿಷ್ಟು ಸಾರಾಯಿ ಕೊಟ್ಟು ‘ಬಾರ್ಟರ್’ ವಿಧಾನದಲ್ಲಿ ಗೋಸುಂಬೆ ಆ ಪೆಟ್ಟಿಗೆಯನ್ನು ತೆಗೆದುಕೊಂಡಿತು.
ಊರಿಗೆ ಬಂದ ನಂತರ ಗೋಸುಂಬೆ ಆಸಕ್ತಿಯಿಂದ ಆ ಪೆಟ್ಟಿಗೆಯನ್ನು ತೆರೆದು ನೋಡಿತು. ಅದರಲ್ಲಿ ಒಂದು ಎಲಾಸ್ಟಿಕ್ ತುಂಡಿತ್ತು. ಗೋಸುಂಬೆ ಎಲಾಸ್ಟಿಕ್ ತುಂಡಿನ ಒಂದು ತುದಿಯನ್ನ ಪ್ರಗತಿಯ ಬಾಲಕ್ಕೆ ಕಟ್ಟಿತು. ಮತ್ತೊಂದು ತುದಿಯನ್ನು ಪಕ್ಕದಲ್ಲಿದ್ದ ಒಣಗಿ ತುಕ್ಕುಹಿಡಿದ ನೀರು ಸರಬರಾಜು ಪೈಪಿಗೆ ಕಟ್ಟಿಬಿಟ್ಟಿತು.
ಅಂದಿನಿಂದ ಪ್ರಗತಿ ಎಲಾಸ್ಟಿಕ್ ಎಳೆಯುತ್ತಾ ಮುಂದೆ ಸಾಗುವುದು, ಸ್ವಲ್ಪ ಹೊತ್ತಾದ ಮೇಲೆ ತಿರುಗಿ ಮೊದಲ ಸ್ಥಾನಕ್ಕೇ ಠಪ್ ಎಂದು ಹಿಂದಿರುಗುವುದೂ ಮಾಡುತ್ತಿದೆ. ಪಕ್ಕದೂರಿನ ಶ್ರೀಸಾಮಾನ್ಯನ ಬಳಿ ಮತ್ತೊಂದು ವಸ್ತು ಇದೆ. ಅದು ಕತ್ತರಿ. ಅವನಿಗೆ ಈ ಅವಸ್ಥೆ ನೋಡಲಾಗುತ್ತಿಲ್ಲ. ಆ ಎಲಾಸ್ಟಿಕ್ ತುಂಡನ್ನು ಕತ್ತರಿಸಬೇಕೆಂದು ಅಂದಿನಿಂದ ಕಾಯುತ್ತಿದ್ದಾನೆ. ಗೋಸುಂಬೆ ಅಲ್ಲೇ ಒಂದು ಕುರ್ಚಿಯಲ್ಲೀ ಪಟ್ಟಾಗಿ ಕೂತು ಪ್ರಗತಿಗಾಗುತ್ತಿರುವ ಗತಿ ಕಂಡು ವಿಕೃತಾನಂದ ಪಡೆಯುತ್ತಿದ್ದಾನೆ. ಹಾಗೇ ಅವನು ಕುರ್ಚಿಯ ಕಾವಲು ಕಾಯುತ್ತಿದ್ದಾನೆ.
ಗೋಸುಂಬೆ ಅಲ್ಲಿಂದ ಎದ್ದರೆ ಎಲಾಸ್ಟಿಕ್ ಕತ್ತರಿಸಬಹುದು. ಎಲಾಸ್ಟಿಕ್ ತುಂಡಾದರೆ ಗೋಸುಂಬೆ ಏಳುತ್ತಾನೆ. ಹೀಗೆ ಇದೊಂದು ವಿಷ ವೃತ್ತವಾಗಿದೆ.
ಆಗಸ್ಟ್ ೧೯೮೭
2 comments:
sir,nijavaagiyu ee kathe super, namma samajavanna bimbisutte
"ಬಸವನ ಹುಳು" ಈ ಕಥೆಯಲ್ಲಿ ಮುಖ್ಯವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಹಾಗೂ ಮತದಾನದ ಮೂಲಕ ಅಧಿಕಾರಗಳಿಸುವ ರೀತಿಯನ್ನು symbolic ಆಗಿ barter system ಮೂಲಕ ಹೇಳಿರುವ ಪ್ರಯತ್ನ ಚೆನ್ನಾಗಿದೆ. ಸಂಶೋಧನೆ ಅನ್ನೋ ಹೆಸರಲ್ಲಿ, ಪ್ರಗತಿಯತ್ತ ಸಾಗುತ್ತಿರುವ ಬಲಹೀನರನ್ನು ಬಲಾಢ್ಯರು ನಡೆಸಿಕೊಳ್ಳುವ ರೀತಿ, ಕಾಲಿಡಿದು ಎಳೆಯುವ ಪ್ರಯತ್ನಗಳು ಇನ್ನೂ ನಡೆಯುತ್ತಲೇ ಇರುವುದು ನಿಜಕ್ಕೂ ಶೋಚನೀಯ. ಮನುಷ್ಯ ಮನುಷ್ಯನ ನಡುವೆ ಇರಬೇಕಾದ ಸಮಾನತೆ, ಪ್ರೀತಿಗಳು ಕಂಡುಬರದೆ ಸಮಾಜದಲ್ಲಿ ಇದೇ ರೀತಿಯ ಮಾನವ ಸಂಘಷಗಳು ನಡೆಯುತ್ತಾ ಹೋದರೆ ಮುಂದೊಂದು ದಿನ ಮಾನವ ಮೌಲ್ಯಗಳಿಗೆ ಬೆಲೆಇಲ್ಲದಂತಾಗಿ ಅವುಗಳ ಸಂಪೂಣ ನಾಶ ಕಂಡುಬಂದರೆ ಆಶ್ಚಯವೇನಿಲ್ಲ.
ಸುಧಾ.
Post a Comment